ಗಂಗೊಳ್ಳಿ ಬೋಟ್ ದುರಂತ ಪ್ರಕರಣ ; ಮ್ಯಾಂಗನೀಸ್ ವಾರ್ಫ್ ನಿವಾಸಿಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮನವಿ
ಗಂಗೊಳ್ಳಿಯಲ್ಲಿ ಕಳೆದ ಸೋಮವಾರ ನಡೆದಿದ್ದ ಬೋಟು ಅಗ್ನಿ ದುರಂತ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿಯನ್ನು ಸಲ್ಲಿಸಿದರು. ಈ ಪ್ರದೇಶದಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸಿ ಯಾಂತ್ರಿಕ ದೋಣಿಯ ನಿರ್ಮಾಣಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿದರು.
ಕಳೆದ ತುಂಬಾ ಸಮಯದಿಂದ ಕೊಳಚೆ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಸ್ಥಳೀಯ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ. ಅಲ್ಲದೇ ಇಲ್ಲಿ ರಾಸಾಯನಿಕ ಮಿಶ್ರಿತ ಯಾಂತ್ರೀಕೃತ ದೋಣಿಯನ್ನು ನಿರ್ಮಿಸುತಿದ್ದು, ಈ ರಾಸಾಯನಿಕ ದ್ರಾವಣದಿಂದ ಸ್ಥಳೀಯ ನಿವಾಸಿಗಳಲ್ಲಿ ಚರ್ಮದ ಹಾಗೂ ಮಕ್ಕಳಲ್ಲಿ ಅಸ್ತಮಾದಂಹ ರೋಗಗಳು ಕಾಣಿಸಿಕೊಂಡಿದೆ. ಅಲ್ಲದೇ ರಾಸಾಯನಿಕ ಮಿಶ್ರಣದ ವಿಷಾನಿಲದಿಂದ ವಯೋವೃದ್ಧರು ಹಾಗೂ ಮಕ್ಕಳಿಗೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ದಮ್ಮು, ಕೆಮ್ಮು ಹಾಗೂ ಉಬ್ಬಸ ಕಾಯಿಲೆಯೂ ಕಂಡುಬಂದಿದೆ ಎಂದು ಮಹಿಳೆಯರು ದೂರಿದರು.
ಹೀಗಾಗಿ ಬಂದರು ಇಲಾಖೆಗೆ ಸೇರಿದ ಈ ಜಾಗದಲ್ಲಿ ಯಾವುದೇ ರೀತಿಯ ರಾಸಾಯನಿಕ ಬಳಸಿ ಬೋಟನ್ನು ನಿರ್ಮಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಸಚಿವರನ್ನು ಒತ್ತಾಯಿಸಿದರು. ಇದೇ ಜಾಗದಲ್ಲಿ ಬೋಟ್ ನಿರ್ಮಾಣ ಕಾರ್ಯವೂ ನಡೆಯುತಿದ್ದು, ಇಲ್ಲಿ ದೂಳು ಹಾಗೂ ಇತರ ವಸ್ತುಗಳಿಂದ ಪಕ್ಕದ ನಿವಾಸಿಗರಿಗೆ ತೊಂದರೆಯಾಗುತ್ತಿದೆ ಎಂದವರು ದೂರಿದರು.
ಈ ಮೊದಲೆಲ್ಲಾ ನಿಗದಿ ಪಡಿಸಿದ ಜಾಗದಲ್ಲಿ ಮಾತ್ರ ಬೋಟನ್ನು ಮೇಲಕ್ಕೆಳೆದು ರಿಪೇರಿ ಮಾಡಿ ಮತ್ತೆ ನೀರಿಗೆ ಬಿಡುತಿದ್ದರು. ಈಗ ಮ್ಯಾಂಗನೀಸ್ ವಾರ್ಫ್‍ನ ಎಲ್ಲಾ ಜಾಗದಲ್ಲೂ ಬೋಟನ್ನು ಇಡುತಿದ್ದು, ಅದರ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಅಲ್ಲೇ ಹಾಕುತಿದ್ದು, ಇದರಿಂದ ತ್ಯಾಜ್ಯ ಕೊಳೆತು ಸೊಳ್ಳೆ ಉತ್ಪತ್ತಿಯಾಗಿ ಆನೆಕಾಲು ರೋಗ, ಡೆಂಗಿ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದವರು ಸಚಿವರ ಗಮನ ಸೆಳೆದರು.