ಕುತ್ತಾರು , ಬೈಕ್ ಅಪಘಾತ : ಮಿದುಳು ನಿಷ್ಕ್ರಿಯ, ಕುಟುಂಬಸ್ಥರಿಂದ ಅಂಗಾಂಗ ದಾನ

ಉಳ್ಳಾಲ: ಕುತ್ತಾರು ದೇವಸ್ಥಾನ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ ಮಿದುಳು ನಿಷ್ಕ್ರಿಯಗೊಂಡಿದ್ದು, ಮನೆಮಂದಿ ಅಂಗಾಂಗ ದಾನ ನಡೆಸಲು ಮುಂದಾಗಿದ್ದಾರೆ.
ಅಪಘಾತ ನಂತರ ಅವರನ್ನು ದೇರಳಕಟ್ಟೆ ಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಗಾಯಾಳು ಮಿದುಳು ನಿಷ್ಕ್ರಿಯಗೊಂಡಿರುವುದನ್ನು ತಿಳಿಸಿದ್ದಾರೆ. ಸಂಜೆ 4 ಗಂಟೆ ನಂತರ ನಡೆದ ವೈದ್ಯಕೀಯ ಪರೀಕ್ಷೆ ಬಳಿಕ ಅಂಗಾಂಗ ದಾನ ನಡೆಸುವ ಕುರಿತು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು. ಮೃತ ಭೂಷಣ್ ಸಹೋದರಿಯ ವಿವಾಹ ಎರಡು ವಾರಗಳ ಹಿಂದೆಯಷ್ಟೇ ನೆರವೇರಿತ್ತು. ತಂದೆ ಮಾರಪ್ಪ ರೈ ವರ್ಷದ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಮೃತ ಭೂಷಣ್ ತಾಯಿ ಜತೆಗೆ ನೆಲೆಸಿದ್ದರು.
