ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ – ಪ್ರಥಮ ಬಿ.ಎ.ಎಂ.ಎಸ್ ಒರಿಯೆಂಟೇಶನ್ ಕಾರ್ಯಕ್ರಮ
ಕೆವಿಜಿ: ಅ.27ರಂದು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ 2025-26 ನೇ ಸಾಲಿನ ಪ್ರಥಮ ಬಿಎಎಂಎಸ್ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮ ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು. ಡಾ. ಕೆ ವಿ ಚಿದಾನಂದ ಅಧ್ಯಕ್ಷರು, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾಭ್ಯಾಸದ ಪ್ರಾಮುಖ್ಯತೆ, ಆಯುರ್ವೇದ ಜನಪ್ರಿಯತೆ, ವೈದ್ಯಕೀಯ ಕ್ಷೇತ್ರದ ಮಹತ್ವ, ವೈದ್ಯರ ನಿಸ್ವಾರ್ಥ ಮನೋಭಾವದ ಸೇವೆ ಹಾಗೂ ಶಿಸ್ತಿನ ಬಗ್ಗೆ ವಿವರಿಸಿದರು. ಇಂದಿನ ಆಧುನಿಕ ಯುಗದಲ್ಲಿ ಪ್ರಾಚೀನ ಮತ್ತು ನವೀನ ವೈದ್ಯಕೀಯ ಪದ್ಧತಿಗಳನ್ನು ಸಮಯೋಚಿತವಾಗಿ ಬಳಸಿಕೊಂಡು ರೋಗಿಗಳ ಕ್ಷೇಮಕ್ಕಾಗಿ ಇರುವ ವಿಫುಲ ಅವಕಾಶಗಳನ್ನು ಹಾಗೂ ಈ ದಾರಿಯಲ್ಲಿ ಸಾಗುವ ನಿಟ್ಟಿನಲ್ಲಿ ಹಿತವಚನವನ್ನು ತಿಳಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾರದ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ತಲಪಾಡಿ -ಮಂಗಳೂರು ಇದರ ಪ್ರಾಂಶುಪಾಲರಾದ ಡಾ. ಸಂದೀಪ್ ಬೇಕಲ್ ಅವರು ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಈಗಿನ ಕಾಲದಲ್ಲಿ ಆಯುರ್ವೇದದ ಪ್ರಾಮುಖ್ಯತೆ, ಆಯುರ್ವೇದವನ್ನು ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿವಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಪ್ರಾಮುಖ್ಯತೆ ಹಾಗೂ ಕಾಲೇಜಿನ ನಿಯಮಗಳನ್ನು ವಿವರಿಸಿ ವಿದ್ಯಾರ್ಥಿ ಜೀವನದ ಮಹತ್ವ, ಸಂಯಮ, ಶಿಸ್ತು ಮತ್ತು ದಕ್ಷತೆಯ ಅಗತ್ಯತೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ತ್ರೈಮಾಸಿಕ ಪತ್ರಿಕೆ ಆಯುರ್ ನ್ಯೂಸ್ – ಸಂಸ್ಕಾರವನ್ನು ಡಾ. ಕೆ. ವಿ. ಚಿದಾನಂದ ಇವರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಕೆವಿಜಿ ಆಯುರ್ವೇದ ಫಾರ್ಮ ಮತ್ತು ರಿಸಸ್ ಸೆಂಟರ್ ಇದರ ಸಿಇಓ ಡಾ. ಪುರುಷೋತ್ತಮ ಕೆ ಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು, ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು ಕಲಿಕಾ ವೈದ್ಯರುಗಳು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಿಕಾ ವೈದ್ಯರುಗಳಾದ ಡಾ. ಅಶ್ವಿನಿ ಭಟ್ ಹಾಗೂ ಡಾ. ಚಿತ್ಕಲಾ ಭಾರದ್ವಾಜ್ ಪ್ರಾರ್ಥಿಸಿ ಡಾ. ಲಕ್ಷ್ಮೀ ಸುರೇಶ್ ಹಾಗೂ ಡಾ. ಯಶಸ್ವಿನಿ ನಿರೂಪಿಸಿದರು. ಕಾಲೇಜಿನ ಅಕಾಡೆಮಿಕ್ ಕೋ-ಆರ್ಡಿನೇಟರ್ ಡಾ. ಕವಿತಾ ಬಿ. ಎಂ. ವಂದಿಸಿದರು.


















