ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಿದೆ
ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲುವು ಬಿಡುವುದಿಲ್ಲ. ನಂದಿನಿ ನಮ್ಮ ಸ್ವಾಭಿಮಾನ ಮತ್ತು ಕರ್ನಾಟಕದ ಹೆಮ್ಮೆ. ಕರ್ನಾಟಕದ ನಂದಿನಿ ಹಿತ ಕಾಯಲಯ ಬಿಜೆಪಿ ಬದ್ಧವಿದೆ. ಕಾಂಗ್ರೆಸ್ ಸುಳ್ಳುಗಳಿಂದಲೇ ಜನರನ್ನು ತಪ್ಪು ದಾರಿಗೆಳೆಯುತ್ತಿದೆ. ನಂದಿನಿಗೆ ಧಕ್ಕೆಯಾಗಲು ಬಿಜೆಪಿ ಸರ್ಕಾರ ಬಿಡಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದರು.
ಅವರು ಮಂಗಳೂರಿನ ಲಾಲ್ ಭಾಗ್‍ನಲ್ಲಿರುವ ರೋಹನ್ ಸಿಟಿ ಸ್ಕ್ವೇರ್‍ನಲ್ಲಿ ಮೂರು ಜಿಲ್ಲೆಗಳ ಬಿಜೆಪಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 2018ರಲ್ಲಿದ್ದ ಹಾಲು ಉತ್ಪಾದನೆ ಈಗ ಡಬಲ್ ಆಗಿರುವುದು ನಂದಿನಿಯ ಸಾಧನೆ ಎಂದು ಹೇಳಿದರು.
ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಿದೆ. ಕಾಂಗ್ರೆಸ್, ಜೆಡಿಎಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಕರ್ನಾಟಕದಲ್ಲಿ ಸುಳ್ಳು ಭರವಸೆಗಳಿಂದ ಮತ ಗಳಿಸಬಹುದು ಅಂದುಕೊಂಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಜನರಿಗೆ ಅರಿವು ಇದೆ. ಈ ಹಿಂದೆ ಛತ್ತೀಸ್‍ಗಡದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಅಂತ ರಾಹುಲ್ ಗಾಂಧಿ ಹೇಳಿದ್ದರು. ಅಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಯಾಕೆ ಈಡೇರಿಸಲು ಆಗಿಲ್ಲ ಎಂದು ಗೌರವ ಭಾಟಿಯಾ ಪ್ರಶ್ನಿಸಿದರು.
ಬೆಲೆ ಏರಿಕೆಯಿಂದ ಜನರಿಗೆ ಸಮಸ್ಯೆ ಆಗಿಲ್ಲ. 2014ರಲ್ಲಿ ಹಣದುಬ್ಬರದ ಸ್ಥಿತಿ ಡಬಲ್ ಡಿಜಿಟ್ ಇತ್ತು. ಆಗ 13 ಪರ್ಸೆಟಂ ಇದ್ದ ಹಣದುಬ್ಬರ ಈಗ 5-6 ಪರ್ಸೆಂಟಿಗೆ ಬಂದಿದೆ. ಈಗ ದೇಶದ ಜಿಡಿಪಿ ದರವೂ ಹೆಚ್ಚಿದೆ. ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಇದೇ ವೇಳೆ 9.5 ಕೋಟಿ ಬಡವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಟ್ಟಿದ್ದೇವೆ. ಇವೆಲ್ಲದರ ಮಧ್ಯೆ ಕೆಲವು ವಸ್ತುಗಳ ಬೆಲೆ ಏರಿದೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಗೌರವ್ ಭಾಟಿಯಾ ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ, ಎಮ್‍ಎಲ್‍ಸಿ ಪ್ರತಾಪ್ ಸಿಂಹ ನಾಯಕ್, ರವಿಶಂಕರ್ ಮಿಜಾರು ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.