ಮಂಡೆಕೋಲು: ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಅವರು ಸೋಮವಾರ ಬಿಡುಗಡೆಗೊಳಿಸಿದರು.

ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ಎಪ್ರಿಲ್ 26 ರಿಂದ ಮೊದಲ್ಗೊಂಡು ಮೇ 4 ರವರೆಗೆ ನಡೆಯಲಿದ್ದು, ಈ ಕುರಿತ ಸರ್ವ ಕಾರ್ಯಗಳಿಗೆ ತಂತ್ರಿಗಳು ಶುಭ ಹಾರೈಸಿದರು. ಅಲ್ಲದೆ ಕೋಟಿ ಲೇಖನ ಯಜ್ಞದ ಮಹತ್ವವನ್ನು ವಿವರಿಸಿ ಕೈಗೆ ಕಂಕಣ ಕಟ್ಟಿ ಸಂಕಲ್ಪ ಮಾಡಿಸಿದರು.

ಇದೇ ವೇಳೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೋಟಿ ಲೇಖನ ಯಜ್ಞದ ಸಂಕಲ್ಪ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಬ್ರಹ್ಮಕಲಶೋತ್ಸವದ ಸರ್ವಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ದೇವಸ್ಥಾನದ ಗೌರವ ಸಲಹೆಗಾರ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ್ ಮಾತನಾಡಿ ಭಗವಂತನ ನಾಮಸ್ಮರಣೆಯೇ ಕೋಟಿ ಲೇಖನ ಯಜ್ಞದ ಉದ್ದೇಶ ಎಂದರು.

ಏನಿದು ಕೋಟಿ ಲೇಖನ ಯಜ್ಞ?

ವಿಷ್ಣುಸಹಸ್ರನಾಮ ಎನ್ನುವುದು ವಿಷ್ಣುವಿನ ಸಾವಿರ ನಾಮಗಳು ಹಾಗೂ ಅತ್ಯಂತ ಪರಿಣಾಮಕಾರಿಯಾದ ಶ್ರೀಹರಿಯ ನಾಮಸ್ಮರಣೆ. ವಿಷ್ಣು ದೇವರನ್ನು ಒಲಿಸಿಕೊಳ್ಳಲು ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಈ ಪಠಣದಿಂದ ಭಯಮುಕ್ತ, ರೋಗಮುಕ್ತ, ಸಂಕಷ್ಟಮುಕ್ತ ಜೀವನವನ್ನು ಪಡೆಯಬಹುದು ಅನ್ನುವ ನಂಬಿಕೆ ವೇದಗಳ ಕಾಲದಿಂದ ಇದೆ.
ಆದರೆ ಎಲ್ಲರಿಗೂ ವಿಷ್ಣುಸಹಸ್ರನಾಮ ಪಠಣ ಕಷ್ಟಸಾಧ್ಯ. ಅದರ ದೋಷರಹಿತ ಶಬ್ಧೋಚ್ಚಾರಗಳು ಕಷ್ಟಸಾಧ್ಯ, ಅದಕ್ಕೆ ಪರ್ಯಾಯವಾಗಿ ಶ್ರೀ ಮಹಾವಿಷ್ಣುವಿನ ಮೂಲಮಂತ್ರ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬೀ ಮಂತ್ರವನ್ನು ಪಠಿಸುವುದು ಸರಳ. ಹೀಗಾಗಿ ಗ್ರಾಮದ ಹಾಗೂ ಪರಿಸರದ ಎಲ್ಲಾ ಮನೆಗಳಲ್ಲೂ, ಮನಗಳಲ್ಲೂ ಪಠಿಸುವುದರ ಜೊತೆಗೆ ಅದನ್ನು ಬರಹದ ಮೂಲಕ ದಾಖಲಿಸಬೇಕು. ಆ ಮೂಲಕ ಬ್ರಹ್ಮಕಲಶೋತ್ಸವದ ಮೂಲಕ ಶ್ರೀ ದೇವರು ಚೈತನ್ಯಗೊಳ್ಳುವಾಗ ಇಡೀ ಊರಿಗೂ ನವಚೈತನ್ಯ ವೃದ್ದಿಯಾಗಬೇಕು ಅನ್ನುವ ಕಾರಣಕ್ಕೆ ತಂತ್ರಿವರ್ಯರ ಸಲಹೆ ಪಡೆದುಕೊಂಡು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಇದನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಗ್ರಾಮದ ಪ್ರತೀ ಮನೆಯಲ್ಲಿ ಬರಹ ಬರುವ ಪ್ರತಿಯೊಬ್ಬ ವ್ಯಕ್ತಿ ಪುಸ್ತಕದಲ್ಲಿ ಪ್ರತಿದಿನ ತನ್ನ ಅನುಕೂಲಕರ ಸಮಯದಲ್ಲಿ ‘ಓಂ ನಮೋ ಭಗವತೇ ವಾಸದೇವಾಯ’ ಎನ್ನುವ ವಿಷ್ಣುವಿನ ಮೂಲಮಂತ್ರವನ್ನು ಸಾಧ್ಯವಾದಲ್ಲಿ ಕನಿಷ್ಟ 108 ಬಾರಿ ಬರೆಯಬೇಕು. ಮುಂಬರುವ ಎಪ್ರಿಲ್ 27 ಕ್ಕೆ ಒಟ್ಟು ಒಂದು ಕೋಟಿಗೂ ಮಿಕ್ಕಿ ಈ ಮೂಲಮಂತ್ರ ಲೇಖನದ ಮೂಲಕ ದಾಖಲಾಗಬೇಕು. ದೇಗುಲದಲ್ಲಿ ಎಪ್ರಿಲ್ 27 ರಂದು ಮಹಾವಿಷ್ಣುವಿನ ವಿಷೇಶ ಯಜ್ಞ ನಡೆಯಲಿದ್ದು ಆ ದಿನ ಊರವರೆಲ್ಲರೂ ದೇವರ ಮೂಲ ಮಂತ್ರ ಬರೆದ ಪುಸ್ತಕಗಳನ್ನು ದೇವಸ್ಥಾನಕ್ಕೆ ತಲುಪಿಸಬೇಕು. ಯಜ್ಞದ ಮುಂಬಾಗದಲ್ಲಿ ಆ ಎಲ್ಲಾ ಪುಸ್ತಕಗಳನ್ನು ಜೋಡಿಸಿಡಲಾಗುತ್ತದೆಯಲ್ಲದೆ ಆ ಹೊತ್ತಗೆಗಳನ್ನು ಯಜ್ಞಕ್ಕೆ ಆಹುತಿ ನೀಡದೆ ಮಂತ್ರೋಚ್ಛಾರಣೆ ಮೂಲಕ ಭಗವಂತನಿಗೆ ಅರ್ಪಿಸುತ್ತಾರೆ. ಈ ಮೂಲಕ ಪ್ರತಿಯೊಬ್ಬರೂ ಈ ಯಜ್ಞದಲ್ಲಿ ಭಾಗಿಯಾದಂತಾಗಿ ಸರ್ವರೂ ವಿಷ್ಣುವಿನ ದಿವ್ಯಾನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂಬುದು ನಂಬಿಕೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪುಂಡರೀಕ ಹೆಬ್ಬಾರ್, ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಕಣೆಮರಡ್ಕ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ವಿವಿಧ ಉಪಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು ಹಾಜರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್ ಧನ್ಯವಾದ ಸಮರ್ಪಿಸಿದರು.

Related Posts

Leave a Reply

Your email address will not be published.