ಅಗ್ರಾರ್ ದರ್ಬೆಯಲ್ಲೊಂದು ಅಪರೂಪದ  ದೈವೀ ತಾಣ

ಮಂಗಳೂರು: ತುಳುನಾಡು ಸತ್ಯ, ಧರ್ಮ, ನ್ಯಾಯ, ನೀತಿಗಳ ನೆಲೆಬೀಡು. ಈ ನಾಡೇ ಆರಾಧನಾಲಯಗಳ ತವರೂರು. ಅದೆಷ್ಟೋ ದೈವಸ್ಥಾನಗಳು, ದೇವಸ್ಥಾನಗಳು, ಮಠ, ಮಂದಿರ, ಗುಡಿ, ಗರಡಿಗಳು, ಮಾಡಗಳು, ಬನಗಳು ತನ್ನ ಕಲೆ ಕಾರ್ಣಿಕ ಮೆರೆಯುತ್ತಾ ತುಳುನಾಡಿನ ಧಾರ್ಮಿಕ ಪರಂಪರೆಗೆ ಕೀರ್ತಿ ತಂದಿದೆ. ಇಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳ ಪೈಕಿ ತುಳುನಾಡಿನಲ್ಲಿ ಪುರಾಣ ಕಾಲಘಟ್ಟದಲ್ಲಿ ಮತ್ತು ಇತಿಹಾಸದಲ್ಲಿ  ವೈಭವದಿಂದ ಮೆರೆದ ಸಾನಿಧ್ಯವೊಂದು ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪ ದ ದರ್ಬೆಯಲ್ಲಿದ್ದು ಭಕ್ತಸಮುದಾಯದ ಆಕರ್ಷಣೆಗೆ ಪಾತ್ರವಾಗಿದೆ.

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಗ್ರಾರ್ ದರ್ಬೆ ದೇವಿ ಪುರ ಎಂಬಲ್ಲಿನ ನಿಸರ್ಗದ ಮಡಿಲಿನ ಪ್ರಕೃತಿ ರಮಣೀಯ ಸುಂದರ  ಪರಿಸರದಲ್ಲಿರುವ ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀ ಕ್ಷೇತ್ರವನ್ನು ಇದೀಗ ಪುನರ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಪುನುರುತ್ಥಾನದೊಂದಿಗೆ ಗತವೈಭವ

ಸಾರಲು ಸಜ್ಜಾಗುತ್ತಿದೆ.

ಪೌರಾಣಿಕ ಹಿನ್ನೆಲೆಯೊಂದಿಗೆ ಇತಿಹಾಸದಲ್ಲಿ ವೈಭವದಿಂದ ಮೆರೆದ ತುಳುನಾಡಿನಲ್ಲೇ ಅತ್ಯಂತ ಅಪರೂಪದ ಈ ದೈವೀ ಸಾನಿಧ್ಯವನ್ನು ಅಂದಾಜು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರವಾಗಿ ಪುನರ್ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಸರ್ವಾಂಗ ಸುಂದರವಾಗಿ ನಾಡಿನ ಭಕ್ತರ ಶ್ರದ್ಧಾಭಕ್ತಿಯ ಆರಾಧನಾ ತಾಣವಾಗಿ ಕಂಗೊಳಿಸಲಿದೆ.

ಕ್ಷೇತ್ರದ ಪೌರಾಣಿಕ ಹಿನ್ನೆಲೆ

ಖುಷಿವರ್ಯರೂ ,ಮಹಾತಪಸ್ವಿಗಳೂ, ಮಹರ್ಷಿಗಳೂ ಆದ ಆಗಸ್ತ್ಯ ಮುನಿಗಳು ದುಷ್ಟರ ಶಿಕ್ಷೆಗಾಗಿ,ಶಿಷ್ಟರ ರಕ್ಷಣೆಯ ಜತೆಯಲ್ಲಿ ಭೂಮಿಯಲ್ಲಿ  ಧರ್ಮನೆಲೆಗೊಳ್ಳಬೇಕೆಂಬ ಉದ್ಧೇಶದಿಂದ ಆದಿಮಾಯೆ ವನದುರ್ಗೆಯನ್ನು ಯಜ್ಞದ ಮೂಲಕ ಉದ್ಬವಿಸಿ ದೇವಿಪುರದಲ್ಲಿ( ದರ್ಬೆ) ತಾಯಿಯನ್ನು   ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀ ಎಂದು ನಾಮಾಂಕಿತಗೊಳಿಸಿ ಪ್ರತಿಷ್ಠಾಪಿಸಿದರು. ನಂತರ ನಾಥ ಪಂಥದವರಿಗೆ ತಪಸ್ಸು ಹಾಗೂ ಪೂಜೆಗಾಗಿ ಇಲ್ಲಿನ ಸಾನಿಧ್ಯ ಮತ್ತು ಭೂಮಿಯನ್ನು ಬಿಟ್ಟು ಕೊಟ್ಟರೆಂಬ ಪ್ರತೀತಿ ಇದೆ.

ಕಾಲಕ್ರಮೇಣ ನಾಥಪಂಥದವರು, ಪುಲಿನಾಪುರದ ಅರಸ ಸುರಥ ಮಹಾರಾಜ ಹಾಗೂ ಕಾರ್ಕಳದ ಅರಸ ಬೈರವ ಸೂಡರ ಕಾಲದಲ್ಲಿ ಖುಷಿಮನಿಗಳಿಂದ ತಪಸ್ಸು, ಪೂಜೆ ಪುರಸ್ಕಾರ, ಉತ್ಸವಗಳೊಂದಿಗೆ ವೈಭವದಿಂದ ಮೆರೆದ ಐತಿಹಾಸಿಕ ಹಿನ್ನೆಲೆಯು ಶ್ರೀ ಕ್ಷೇತ್ರಕ್ಕಿದೆ. ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸಾನಿಧ್ಯಕ್ಕೂ ಇಲ್ಲಿಗೂ ಅವಿನಾಭಾವ ಸಂಬಂಧವಿರುವುದು ಗಮನಾರ್ಹ ಅಂಶವಾಗಿದೆ.

ಆದಿಮಾಯೆಯ ಅನುಗ್ರಹಕ್ಕೆ ಪಾತ್ರವಾದ ಕುಟುಂಬ

ಕಾಲಕ್ರಮೇಣ ಕಾಲಗರ್ಭದ ಸುಳಿಗೆ ಸಿಲುಕಿದ  ಸದ್ರಿ ಸ್ಥಳದಲ್ಲಿ ಕುಟುಂಬವೊಂದು ವಾಸವಾಗಿ ದೈವದೇವರ ಸೇವೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದರು. ಹಾಗಿರುವಾಗ ಬಾಲ್ಯದಿಂದಲೇ ದೇವಿಯ ಆರಾದನೆ ಮಾಡುತ್ತಿದ್ದ ದೇವಿಯ ಪರಮಭಕ್ತೆ ಸ್ತ್ರೀವೊರ್ವರ ಮೇಲೆ ಆದಿಮಾಯೆಯು ಪ್ರಕಟವಾಗಿ ಪುರಾಣ ಕಾಲದ ಇತಿಹಾಸವನ್ನು ತಿಳಿಸಿದಲ್ಲದೆ  ತನ್ನನ್ನು ಆದಿಶಕ್ತಿ ರಾಜ ಚಾಮುಂಡೇಶ್ವರೀ ಎಂದು  ಆರಾದಿಸಿಕೊಂಡು ಬಂದಲ್ಲಿ ಮುಂದಿನ ದಿನದಲ್ಲಿ ಈ ಸಾನಿಧ್ಯವು ಕ್ಷೇತ್ರವಾಗಿ ಭಕ್ತರ ಪಾಲಿಗೆ ಅಭಯದ ಕ್ಷೇತ್ರವಾಗುತ್ತದೆ ಎಂದು  ಅಪ್ಪಣೆಯಾದ ಮೇರೆಗೆ ಕಳೆದ ಹದಿನಾಲ್ಕು ವರ್ಷಗಳಿಂದ ಚಿಕ್ಕ ಗುಡಿಕಟ್ಟಿ ಅಮ್ಮನನ್ನು ಆರಾದಿಸಿಕೊಂಡು ಬರಲಾಗುತ್ತಿದೆ.

ದೇವಿ ಉಪಾಸಕರಾದ ಶ್ರೀಮತಿ ರಂಜಿತಾ ದೀಕ್ಷಿತ್ ಅವರು ಅಪಾರ ದೈವಭಕ್ತರಾಗಿ, ನೇಮ, ನಿಷ್ಠೆ, ಧ್ಯಾನ,ಅನುಷ್ಠಾನ, ಜಪ ತಪ, ಉಪಾಸನೆಯಿಂದ  ದೈವೀ ಶಕ್ತಿಯನ್ನು ಸಿದ್ಧಿಸಿಕೊಂಡು ತಾಯಿಯ ಆರಾದನೆಯನ್ನು ಶ್ರದ್ಧಾಭಕ್ತಿಪೂರ್ವಕ  ಮಾಡುತ್ತಿದ್ದಾರೆ. ದರ್ಶನ ಸೇವೆ, ಪ್ರಶ್ನಾಚಿಂತನೆಯ ಮೂಲಕ ನೊಂದು ಬಂದವರ ಬಾಳಿಗೆ ಬೆಳಕಾಗುತ್ತಿರುವ ಅಮ್ಮನವರು ಆಸ್ತಿಕರ ಪಾಲಿಗೆ ಆಶಾಕಿರಣವಾಗಿದ್ದಾರೆ.

ಇಷ್ಟಾರ್ಥ ಸಿದ್ದಿಸುವ ಪುಣ್ಯ ಭೂಮಿ

ಪ್ರಸ್ತುತ ಊರ-ಪರವೂರ ಹಾಗೂ ದೂರದ ಊರಿನ  ಭಕ್ತರು ಸಾನಿಧ್ಯಕ್ಕೆ ಆಗಮಿಸಿ ತಮ್ಮ ಸಂಕಷ್ಟವನ್ನು ಹೇಳಿಕೊಂಡು ಪ್ರಾರ್ಥನೆ ಸಲ್ಲಿಸಿ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳುತ್ತಿದ್ದಾರೆ.

ಮಂಗಳವಾರ, ಶುಕ್ರವಾರ, ಸಂಕ್ರಮಣ ದಿನದಂದು ವಿಶೇಷ ಪೂಜೆ, ನವರಾತ್ರಿ ಪೂಜೆ, ವಾರ್ಷಿಕ ಪೂಜೆ, ಭಜನಾ ಸಂಕೀರ್ತನೆಯೊಂದಿಗೆ ಅನ್ನದಾನ, ಅನಾರೋಗ್ಯ ಪೀಡಿತರಿಗೆ, ಬಡಮಕ್ಕಳ ಮದುವೆ, ಶಿಕ್ಷಣಕ್ಕೆ ಶಕ್ತ್ಯಾನಸಾರ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ.

ಸಾನಿಧ್ಯವು ನಂಬಿಬಂದ ಭಕ್ತಾರ ಸಂಕಷ್ಟ ಪರಿಹರಿಸಿ, ಇಷ್ಟಾರ್ಥ ಸಿದ್ದಿಸುವ ಪುಣ್ಯ ಪವಿತ್ರ ಪಾವನ ನೆಲೆಯಾಗಿ ಮೆರೆಯುತ್ತಿದೆ. ಅಮ್ಮನವರು ಭಕ್ತರ ಪಾಲಿಗೆ ಇಲ್ಲಿ “ಲೆತ್ತ್ ಪಾತೆರುನ ಶಕ್ತಿ” ( ಕರೆದು ಮಾತಾಡುವ ಶಕ್ತಿ) ಎಂದೇ ಪ್ರಸಿದ್ಧರಾಗಿದ್ದು “ಮಣ್ಣೇ ಮರ್ದಾದ್ ಪಲಿಪುನ ತಲ” ( ಮಣ್ಣೇ ಮದ್ದಾಗಿ ಫಲಿಸುವ ಸ್ಥಳ) ಎಂಬ ಪ್ರಖ್ಯಾತಿಯನ್ನೂ ಸ್ಥಳಸಾನಿಧ್ಯವು ಪಡೆದಿದೆ.

ಶ್ರೀ ದೇವಿಯು ಮಾಗಣೆಗೆ ಸಂಬಂಧಪಟ್ಟ ಶಕ್ತಿ ದೇವತೆಯೆಂದು ದೇವಪ್ರಶ್ನೆಯಲ್ಲಿ ತಿಳಿದು ಬಂದಿದೆ. ಅಲ್ಲದೆ ಅಮ್ಮನವರ ನುಡಿಯಲ್ಲಿ ತಿಳಿಸಿದ ಎಲ್ಲಾ ವಿಚಾರಗಳು ಸತ್ಯವೆಂಬುದು ದೇವ  ಪ್ರಶ್ನೆಯಲ್ಲೂ ಕಂಡು ಬಂದಿದೆ.

ಪುನರುತ್ಥಾನ ಸಂಕಲ್ಪ

 ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಸಾನಿಧ್ಯವನ್ನು ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದ್ದು ಅದರಂತೆ ಗರ್ಭಗುಡಿ, ಸುತ್ತು ಪೌಳಿ, ಮುಖಮಂಟಪ, ಧ್ವಜಸ್ತಂಭ ನಿರ್ಮಾಣ, ಆಗಸ್ತ್ಯ ಮಹರ್ಷಿಗಳ ಗುರುಪೀಠ ಸ್ಥಾಪನೆ, ಸಾನಿಧ್ಯದ ಪರಿವಾರ ಶಕ್ತಿಗಳಾದ ಕ್ಷೇತ್ರಪಾಲ, ಭದ್ರಕಾಳಿ,ಶ್ರೀ ನಾಗದೇವರು, ಚಾಮುಂಡಿ-ಗುಳಿಗ, ಕೊರಗಜ್ಜ ಹಾಗೂ ಧರ್ಮದೈವಗಳಿಗೆ ಸಾನಿಧ್ಯ, ಗೋ ಶಾಲೆ, ಆವರಣ ಗೋಡೆ, ಕಚೇರಿ, ಸಮುದಾಯ ಭವನ, ಧ್ಯಾನ ಮಂದಿರ, ಶೌಚಾಲಯಗಳು, ಗ್ರಂಥಾಲಯ

ಸಹಿತ ಸಕಲ ಮೂಲಭೂತ ಸೌಕರ್ಯಗಳೊಂದಿಗೆ

ಸರ್ವ ಜಾತಿ-ಜನಾಂಗದವರ ಸಮಗ್ರ ಶ್ರೇಯೋಭಿವೃದ್ಧಿಯ ಮಾದರಿ ಕ್ಷೇತ್ರವಾಗಿ ರೂಪುಗೊಳ್ಳಬೇಕೆಂಬ ಮಹಾದಾಸೆಯನ್ನು ಇರಿಸಲಾಗಿದೆ.

 ಶ್ರೀ ಜ್ವಾಲಾ ಕರಾಲ ಭದ್ರಕಾಳಿ ಅಮ್ಮನವರ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ವಸಂತ್ ಪಂಡಿತ್ ಕೊಯಿಲ, ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ವಿಶ್ವನಾಥ ಕರ್ಕೆರ, ಶ್ರೀ ದೇವಿಯ ಉಪಾಸಕರಾದ ಶ್ರೀಮತಿ ರಂಜಿತಾ ದೀಕ್ಷಿತ್ ಅವರ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಸರ್ವ ಧರ್ಮಿಯ ಭಕ್ತಾದಿಗಳ ಸಹಕಾರದೊಂದಿಗೆ ಶೀಘ್ರದಲ್ಲಿ  ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯ ನಡೆಯಲಿದೆ.

ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪೂಜೆ, ಉತ್ಸವಾದಿಗಳೊಂದಿಗೆ ಸಾಮಾಜಿಕ, ಆರೋಗ್ಯ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಜನೋಪಯೋಗಿ ಚಟುವಟಿಕೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.

ಕ್ಷೇತ್ರದ ಪುನರ್ ನಿರ್ಮಾಣ  ಯೋಜನೆಗಳು ಯಶಸ್ವಿಯಾಗಿ ನೆರವೇರಲು ಸಹೃದಯಿ ದಯಾಪರ ಸದ್ಭಕ್ತರು, ದಾನಿಗಳು ತನು-ಮನ-ಧನದ ಆತ್ಮಪೂರ್ವಕ ಸಹಕಾರ ನೀಡಿ   ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಮ್ರ ನಿವೇದನೆ.

ವಿಶೇಷ ಸೂಚನೆ: ಕ್ಷೇತ್ರದ ಅಭಿವೃದ್ಧಿಗೆ ದೇಣಿಗೆ ನೀಡುವವರು ಹೆಚ್ ಡಿ ಎಫ್ ಸಿ ಬ್ಯಾಂಕ್ ಬಿ.ಸಿ.ರೋಡು ಶಾಖೆಯ ಖಾತೆ ನಂಬ್ರ 502000067243738( IFSC Code: HDFC0003316) ಗೆ ಪಾವತಿಸಬಹುದಾಗಿದೆ.

ಗೋಪಾಲ ಅಂಚನ್

Related Posts

Leave a Reply

Your email address will not be published.