ಉಡುಪಿ: ತುಳು ಜಾನಪದ ಲೋಕ ಬರೆದಿಟ್ಟ ಬಾಬು ಅಮೀನ್: 80ರ ಪ್ರಾಯದ ಅಭಿನಂದನಾ ಸಮಾರಂಭ

ಉಡುಪಿ ಬನ್ನಂಜೆಯ ನಾರಾಯಣ ಗುರು ಭವನದ ಕೆ. ತೋಮ ಶ್ಯಾನುಭೋಗ ವೇದಿಕೆಯಲ್ಲಿ ನಡೆದ ಬನ್ನಂಜೆ ಬಾಬು ಅಮೀನ್ ಅವರಿಗೆ ೮೦ರ ಪ್ರಾಯದ ಅಭಿನಂದನಾ ಸಮಾರಂಭ ನಡೆಯಿತು. ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅವರು ಬಾಬು ಅಮೀನರನ್ನು ಜಾನಪದ ಅಧ್ಯಯನ ವೀರ ಎಂದು ಬಣ್ಣಿಸಿದರು.

ಬನ್ನಂಜೆಯವರ ಜಾನಪದ ಬರಹ ಸಂಪತ್ತು ಬೆಲೆ ಕಟ್ಟಲಾಗದ್ದು ಎಂದು ಅವರು ಕೊನೆಯಲ್ಲಿ ನಡೆದ ಅಭಿನಂದನಾ ನುಡಿ ಭಾಷಣದಲ್ಲಿ ಹೇಳಿದರು. ಬಾಬು ಅಮೀನರ ಮುದ್ರಿತ ಪುಸ್ತಕಗಳಿಂದಲೇ ಅವರ ಅಕ್ಷರ ತುಲಾಬಾರ ನಡೆಯಿತು.

ಬೆಳಿಗ್ಗೆ ಕಾಟಾಚಾರ ಎಂಬಂತೆ ನಡೆದ ಉದ್ಘಾಟನೆಯನ್ನು ನೆರವೇರಿಸಿದ ನಾಡೋಜ ಜಿ. ಶಂಕರ್ ಅವರು ಒಳ್ಳೆಯದಾಗಲಿ ಎಂದು ಹಾರೈಸಿ ಬೆಣ್ಣೆಕುದುರಿನತ್ತ ಹೊರಟರು. ಈ ಸಂದರ್ಭದಲ್ಲಿ ಸಾಹಿತಿ ಬಿ. ಎಂ. ರೋಹಿಣಿಯವರು ಬನ್ನಂಜೆ ಬಾಬು ಅಮೀನರ ಗರೊಡಿ ಚಿಂತನೆ ಪುಸ್ತಕ ಬಿಡುಗಡೆ ಮಾಡಿ ಬಾಬು ಅಮೀನರದು ಮುಂದಿನ ತಲೆಮಾರು ಶ್ಲಾಘಿಸುವ ಸಾಹಿತ್ಯ ಎಂದರು. ಮಹಿಳಾ ದೈವಸ್ಥಾನಕ್ಕೆ ಮಹಿಳೆಯರಿಗೇ ಪ್ರವೇಶವಿಲ್ಲದ ಬಗೆಗೆ ಪ್ರಶ್ನಿಸಿದರು.

ಬನ್ನಂಜೆಯವರ ಬರಹದ ಬಗೆಗೆ ನಡೆದ ಗೊಟ್ಟಿಯಲ್ಲಿ ಗಣನಾಥ ಎಕ್ಕಾರ್ ಅವರು ವಿಶ್ವವಿದ್ಯಾನಿಲಯಗಳು ಡಾಕ್ಟರೇಟ್ ನೀಡುವಾಗ ಬನ್ನಂಜೆಯವರತ್ತ ನೋಡದಿರುವುದು ಅಚ್ಚರಿ ತಂದಿದೆ ಎಂದರು. ದುಗ್ಗಪ್ಪ ಕಜೆಕಾರ್ ಮೊದಲಾದವರು ಸಹ ಬನ್ನಂಜೆಯವರ ಬರಹ ಹಲವು ಡಾಕ್ಟರೇಟ್‌ಗಳಿಗೆ ಸಮ ಎಂದರು.

ಅಭಿನಂದನೆಯ ನುಡಿಯಾಡಿದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಇಲ್ಲಿ ತುಳು ಸಂಸ್ಕೃತಿಯ ಸಮಗ್ರತೆ ಕಾಣುತ್ತಿದೆ. ತುಳು ಅವೈದಿಕ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಸಿರಿ ಕುರಲ್ ನೆನಪಿನ ಕೃತಿ ಬಿಡುಗಡೆ ಮಾಡಿದ ಕುದ್ರೋಳಿ ಆಲಯ ಕೋಶಾಧಿಕಾರಿ ಪದ್ಮರಾಜ್ ಅವರು ಜಾನಪದ ಅಧ್ಯಯನ ಮಾಡಿದ್ದಲ್ಲದೆ ಹೇಳಿದಂತೆ ಅದನ್ನೇ ಬದುಕಿದವರು ಎಂದು ಬಾಬು ಅಮೀನರ ಬಗೆಗೆ ಹೇಳಿದರು.

ಜನಪದ ಪ್ರದರ್ಶನಗಳು ಇದ್ದವು. ಅಭಿನಂದನಾ ಸಮಿತಿಯ ಸೂರ್ಯೋದಯ ಪೆರಂಪಳ್ಳಿ, ಜಯಕರ ಶೆಟ್ಟಿ ಇಂದ್ರಾಳಿ, ರಘುನಾಥ ಮಾಬಿಯಾನ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.