MDMA ಹಾಗೂ ಪಿಸ್ತೂಲ್ ಹೊಂದಿದ ಕುಖ್ಯಾತ ಡ್ರಗ್ ಪೆಡ್ಲರ್‍ಗಳ ಸೆರೆ
ಮಂಗಳೂರು ನಗರದಾದ್ಯಂತ ಮಾದಕ ವಸ್ತುವಾದ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಡ್ರಗ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ಮೂಲಕ ಬಂಧಿಸಲಾಗಿದೆ. ಸುಮಾರು 9ಲಕ್ಷದ ಮೌಲ್ಯದ ಎಂಡಿಎಂಎ ಡ್ರಗ್ಸ್ ಹಾಗೂ ಪಿಸ್ತೂಲ್ , ಡ್ರಾಗನ್ ಚೂರಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಹೇಳಿದ್ದಾರೆ.
ಅವರು ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಮಾರುತಿ ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎಯನ್ನು ಕಾರಿನಲ್ಲಿ ವಶದಲ್ಲಿರಿಸಿಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ದಾಳಿ ನಡೆಸಿ ಎಂಡಿಎಂಎ ಎಂಬ ನಿಷೇದಿತ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಮೊಹಮ್ಮದ್ ನಿಯಾಜ್(28),ನಿಶಾದ್ (31), ಮಹಮ್ಮದ್ ರಜೀನ್ (24) ಬಂಧಿತರಾಗಿದ್ದಾರೆ. ಇವರನ್ನು ವಶಕ್ಕೆ ಪಡೆದುಕೊಂಡು ಒಟ್ಟು 180 ಗ್ರಾಂ ತೂಕದ ರೂ. 9,00,000/- ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮಾರುತಿ ಸ್ವಿಫ್ಟ್ ಕಾರುಗಳು 2, 1,40,000/- ಮೌಲ್ಯದ 4 ಮೊಬೈಲ್ ಪೋನ್ ಗಳು, ನಗದು ರೂ. 22,050/- ಪಿಸ್ತೂಲ್-1, ಸಜೀವ ಗುಂಡು-1, ಡ್ರಾಗನ್ ಚೂರಿಗಳು-2, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 27,62,000 ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯಾಚರಣೆ ಮುಂದುವರಿದೆ ಎಂದು ಅವರು ಹೇಳಿದರು. ಇವರ ವಿರುದ್ಧ ಈಗಾಗಲೇ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ನಿಯಾನ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ನಗರದ ಉರ್ವಾ, ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಎಎಸ್‍ಐ ಯವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯವರಿಗೆ ಹಲ್ಲೆ ನಡೆಸಿದ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟ 2 ಪ್ರಕರಣ, ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 2 ದರೋಡೆ ಪ್ರಕರಣ ದಾಖಲಾಗಿರುತ್ತದೆ.
ಅಲ್ಲದೇ ಕಂಕನಾಡಿ ನಗರ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ಸೇವನೆಗೆ ಸಂಬಂಧಪಟ್ಟ 2 ಪ್ರಕರಣಗಳು ಹೀಗೆ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತದೆ. ಈತನು ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದು, ವಾರಂಟ್ ಜ್ಯಾರಿಯಾಗಿರುತ್ತದೆ ಎಂದು ಅವರು ಹೇಳಿದರು.
ಇನ್ನೋರ್ವ ಅರೋಪಿ ಮೊಹಮ್ಮದ್ ರಝೀನ್ ಎಂಬಾತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ಮತ್ತು ಮಾರಾಟಕ್ಕೆ ಸಂಬಂದಪಟ್ಟಂತೆ ಪ್ರಕರಣವೊಂದು ದಾಖಲಾಗಿರುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.