ಪಿಲಿಪರ್ಬ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಳೂರಿನ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಆರಂಭವಾಗಿರುವ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಎರಡನೇ ವರ್ಷದ ಪಿಲಿಪರ್ಬದ ಆಮಂತ್ರಣ ಪತ್ರಿಕೆಯನ್ನು ಪ್ರತಿಷ್ಠಾನದ ಮಾರ್ಗದರ್ಶಕರೂ, ಸಂಸದರೂ, ಭಾಜಪಾ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಅಕ್ಟೋಬರ್ 21 ರಂದು ನಡೆಯುವ ಪಿಲಿಪರ್ಬ ಈ ವರ್ಷವೂ ಆದ್ದೂರಿಯಾಗಿ ನಡೆಯಲಿದೆ. ಒಟ್ಟು 15 ತಂಡಗಳು ಭಾಗವಹಿಸಲಿದ್ದು, ಕಲಾಪ್ರೇಮಿಗಳಿಗೆ ಭರ್ಜರಿ ರಸದೌತಣ ಸಿಗಲಿದೆ ಎಂದರು.
ಪಿಲಿಪರ್ಬದ ನೇತೃತ್ವ ವಹಿಸಿರುವ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ತುಳುನಾಡಿನ ಸಂಸ್ಕೃತಿ ಹುಲಿವೇಷವನ್ನು ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಲು ನಮ್ಮ ಪ್ರತಿಷ್ಠಾನ ಬದ್ಧವಾಗಿದೆ. ಹುಲಿವೇಷಧಾರಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಿಲಿಪರ್ಬ ಉತ್ತಮ ವೇದಿಕೆ ನಿರ್ಮಿಸಿದೆ. ಇದಕ್ಕೆ ತುಂಬಾ ಆರ್ಥಿಕ ವೆಚ್ಚ ಅನಿವಾರ್ಯವಾಗಿದ್ದು, ನಮ್ಮನ್ನು ಬೆಂಬಲಿಸಲು ಮುಂದೆ ಬಂದಿರುವ ಎಲ್ಲಾ ಸಂಘ, ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ ಪಾಂಡೇಶ್ವರ, ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ಜಗದೀಶ್ ಕದ್ರಿ, ಚೇತನ್ ಕಾಮತ್, ಲಲಿತ್ ಮೆಂಡನ್, ಶಾನ್ ಉಪಸ್ಥಿತರಿದ್ದರು.