ವಿದ್ಯುತ್ ಹಾಗೂ ರೈಲ್ವೇ ಖಾಸಗೀಕರಣದ ಮೂಲಕ ದೇಶದ ಸಂಪತ್ತು ಕಾರ್ಪೊರೇಟ್ ಗಳ ಸುಪರ್ದಿಗೆ – ಮೀನಾಕ್ಷಿ ಸುಂದರಂ*

ಒಳ್ಳೆಯ ದಿನಗಳು ಬರಲಿದೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯೇರಿ ಕಳೆದ 9 ವರ್ಷಗಳಿಂದ ಜನಸಾಮಾನ್ಯರ ಬದುಕನ್ನು ಸರ್ವನಾಶಗೊಳಿಸಿದ ಕೇಂದ್ರದ ನರೇಂದ್ರ ಮೋದಿ ಸರಕಾರವು ನಿತ್ಯ ನಿರಂತರವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಹಾಗೂ ರೈತ ಕಾರ್ಮಿಕ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ.ಎಲ್ಲಾ ಕೈಗಾರಿಕೆಗಳ ತಾಯಿ ಹಾಗೂ ಆಧುನಿಕ ನಾಗರಿಕ ಸಮಾಜದ ಕೇಂದ್ರ ನರಮಂಡಲದಂತೆ ಕಾರ್ಯನಿರ್ವಹಿಸುವ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಹುನ್ನಾರ ನಡೆಸುತ್ತಿದೆ.

ಮತ್ತೊಂದು ಕಡೆ ಜನರ ಜೀವನಾಡಿಯಾದ ದೇಶದ ಆರ್ಥಿಕತೆಯ ಜೀವಾಳವಾದ ರೈಲ್ವೇಯನ್ನೂ ಕೂಡ ಕಾರ್ಪೊರೇಟ್ ಗಳ ಸುಪರ್ದಿಗೆ ನೀಡಿ ದೇಶದ ಆರ್ಥಿಕತೆಯನ್ನು ವಿನಾಶದ ಅಂಚಿಗೆ ತಳ್ಳುತ್ತಿರುವ ಕೇಂದ್ರ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೇರದಂತೆ ತಡೆಯುವ ಮಹತ್ತರ ಜವಾಬ್ದಾರಿ ದೇಶದ ರೈತ ಕಾರ್ಮಿಕರ ಮೇಲಿದೆ ಎಂದು CITU ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂರವರು ಸಮಸ್ತ ರೈತ ಕಾರ್ಮಿಕ ವರ್ಗವನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ವಿದ್ಯುತ್, ರೈಲ್ವೇ ಖಾಸಗೀಕರಣದ ವಿರುದ್ದ, ಜನಪರ ಪರ್ಯಾಯ ನೀತಿಗಳಿಗಾಗಿ ಆಗ್ರಹಿಸಿ ನಗರದ ಬಲ್ಮಠದಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಜರುಗಿದ ರೈತ ಕಾರ್ಮಿಕ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಆದಿವಾಸಿ ಹಾಗೂ ಜನಪರ ಸಂಘಟನೆಗಳ ದ.ಕ.ಜಿಲ್ಲಾ ಮಟ್ಟದ ಜಂಟಿ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಅವರು ,ಈ ಮಾತುಗಳನ್ನು ಹೇಳಿದರು.

AITUC ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಬಿ.ಅಮ್ಜದ್ ರವರು ಮಾತನಾಡುತ್ತಾ, ಕೋಮುವಾದಿ ಕಾರ್ಪೊರೇಟ್ ಗಳ ಕೂಟ ದೇಶವನ್ನು ಆಳುತ್ತಿದ್ದು,ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ನವ ಉದಾರೀಕರಣ ನೀತಿಗಳನ್ನು ಅತ್ಯಂತ ವೇಗದಲ್ಲಿ ಜಾರಿಗೊಳಿಸುತ್ತಿದೆ. ದುಡಿಯುವ ವರ್ಗವನ್ನು ಹಾಗೂ ಜನತೆಯನ್ನು ಕೋಮು ಆಧಾರದಲ್ಲಿ ವಿಂಗಡಿಸಿ ನೈಜ ಸಮಸ್ಯೆಗಳಿಂದ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಿ ತಮ್ಮ ರಾಜಕೀಯ ಲಾಭವನ್ನು ಪಡೆಯಲು ಸ್ವತಃ ಕೇಂದ್ರ ಸರಕಾರವೇ ಪ್ರಚೋದಿಸುತ್ತಿದೆ ಎಂದು ಹೇಳಿದರು.

ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಫಣೀಂದ್ರ, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಮುಖಂಡರಾದ ಶಾಂತಲಾ ಗಟ್ಟಿ, ಅಧ್ಯಕ್ಷೀಯ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ INTUC ಜಿಲ್ಲಾ ನಾಯಕರಾದ ಸುರೇಶ್ ಬಾಬು, AIKS ಜಿಲ್ಲಾ ನಾಯಕರಾದ ಕೆ.ಯಾದವ ಶೆಟ್ಟಿ, AITUC ಜಿಲ್ಲಾ ಮುಖಂಡರಾದ ಬಿ.ಶೇಖರ್, CITU ಜಿಲ್ಲಾ ನಾಯಕರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡಿ, ಕೇಂದ್ರ ಸರಕಾರ ತಪ್ಪು ಆರ್ಥಿಕ ನೀತಿಗಳಿಂದ ಜನತೆ ಅನುಭವಿಸುತ್ತಿರುವ ಯಾತನೆಗಳ ಬಗ್ಗೆ ಸವಿವರವಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಂಟಿ ವೇದಿಕೆಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು, ಕಳೆದ 9 ವರ್ಷಗಳಿಂದ ದೇಶದ್ರೋಹಿ ವರ್ತನೆ ತೋರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ನವೆಂಬರ್ 26,27,28 ರಂದು ಮೂರು ದಿನಗಳ ಕಾಲ ದೇಶಾದ್ಯಂತ ನಡೆಯಲಿರುವ ಬ್ರಹತ್ ಹೋರಾಟದ ರೂಪುರೇಷೆಗಳನ್ನು ವಿವರಿಸಿದರು.

ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವಿಮಾ ನೌಕರರ ಸಂಘದ ಅಲ್ಬನ್ ಮಸ್ಕರೇನಸ್, ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ.ಕೆ, ಪ್ರಗತಿಪರ ಅಧ್ಯಾಪಕರ ವೇದಿಕೆಯ ಡಾ.ವಸಂತ ಕುಮಾರ್, ವಿಮಾ ಪ್ರತಿನಿಧಿಗಳ ಸಂಘಟನೆಯ ಸೋಮಶೇಖರ್, CITU ನ ವಸಂತ ಆಚಾರಿ, AITUCಯ ಸೀತಾರಾಮ ಬೇರಿಂಜ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಮಹಿಳಾ ಸಂಘಟನೆಗಳ ಜಯಂತಿ ಶೆಟ್ಟಿ, ಚಂದ್ರಕಲಾ ಜೋಗಿ, ಸುಲೋಚನಾ ಕವತ್ತಾರು, ದಲಿತ ಹಕ್ಕುಗಳ ಸಮಿತಿಯ ಕ್ರಷ್ಣಪ್ಪ ಕೋಣಾಜೆ, ದಲಿತ ಸಂಘರ್ಷ ಸಮಿತಿಯ ಎಂ.ದೇವದಾಸ್, DYFIನ ಬಿ.ಕೆ.ಇಮ್ತಿಯಾಜ್, AIYFನ ಪ್ರೇಮನಾಥ್, ಇಪ್ಟಾದ ಸುರೇಶ್ ಕುಮಾರ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ನಾಯಕರಾದ ಯೋಗೀಶ್ ಜಪ್ಪಿನಮೊಗರು, ರಾಘವ ಕೆ, ಕರುಣಾಕರ್, ಬಿ.ಎನ್ ದೇವಾಡಿಗ, ವಸಂತ ಕುಮಾರ್, ವಿನಿತ್ ದೇವಾಡಿಗ, ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ಪುಷ್ಪಾರಾಜ್ ಬೋಳೂರು, ಜಗತ್ಪಾಲ್, ಭಾರತಿ ಬೋಳಾರ,ರಾಧಾ ಮೂಡಬಿದ್ರೆ, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ಸದಾಶಿವದಾಸ್, ಕ್ರಷ್ಣಪ್ಪ ಸಾಲ್ಯಾನ್, ಚರಣ್ ಶೆಟ್ಟಿ, ಮರ್ಲಿನ್ ರೇಗೋ, ಫ್ಲೇವಿ ಕ್ರಾಸ್ತಾ, ಶಾಂತಿ ಡಾಯಸ್, ಡಯಾನ ಡಿಸೋಜ, ಮಹೇಶ್ ನಾಯಕ್, ಸಮರ್ಥ್ ಭಟ್, ನಿತಿನ್ ಬಂಗೇರ ಮುಂತಾದವರು ಹಾಜರಿದ್ದರು.

Related Posts

Leave a Reply

Your email address will not be published.