ಮಂಗಳೂರು: ದಸರಾದ ಮೆರಗು ಹೆಚ್ಚಿಸಿದ ಕ್ರೈಸ್ತ ಬಾಂಧವರ ಟ್ಯಾಬ್ಲೋ
ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ತತ್ವಚಿಂತನೆಯನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪಿತ ಕುದ್ರೋಳಿ ಶ್ರೀಕ್ಷೇತ್ರದ ದಸರಾ ವಿಶ್ವವಿಖ್ಯಾತ ಮಂಗಳೂರು ದಸರಾವೆಂದೇ ಪ್ರಸಿದ್ಧ. ಈ ದಸರಾ ಶೋಭಾಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಕ್ರೈಸ್ತ ಬಾಂಧವರ ಟ್ಯಾಬ್ಲೊ ಮಂಗಳೂರು ದಸರಾ ಮೆರುಗು ಹೆಚ್ಚಿಸಿದೆ. ಜೊತೆಗೆ ಧರ್ಮಧರ್ಮಗಳ ನಡುವಿನ ಬಾಂಧವ್ಯ ವೃದ್ಧಿಸಿದೆ.
ಕ್ರೈಸ್ತ ಬಾಂಧವರ ಸ್ತಬ್ಧಚಿತ್ರ ಇದೇ ಮೊದಲ ಬಾರಿಗೆ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಭಾಗವಹಿಸಿದೆ. ಸಾದಾಸೀದ ಆಗಿರುವ ಈ ಸ್ತಬ್ಧಚಿತ್ರದ ಮುಂಭಾಗದಲ್ಲಿಯೇ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳ ಚಿತ್ರವಿದೆ. ಟ್ಯಾಬ್ಲೊದಲ್ಲಿ ಮೂರು ಹಸ್ತಗಳು ಗ್ಲೋಬ್ ಅನ್ನು ಎತ್ತಿ ಹಿಡಿದಿದೆ. ಹಸ್ತ ಸಹಿತವಾಗಿ ಗ್ಲೋಬ್ ಸುತ್ತಲೂ ಸುತ್ತುತ್ತಿದ್ದು, ಈ ಗ್ಲೋಬ್ ಆಕರ್ಷಕ ನೀಲಿ ರಂಗಿನಿಂದ ಮಿನುಗುತ್ತಿದೆ. ಈ ಮೂರು ಹಸ್ತಗಳು ಹಿಂದೂ – ಮುಸ್ಲಿಂ – ಕ್ರೈಸ್ತ ಧರ್ಮಗಳನ್ನು ಪ್ರತಿನಿಧಿಸುತ್ತದೆ. ಎಲ್ಲಾ ಧರ್ಮದವರು ಸೇರಿ ಈ ಸಮಾಜವನ್ನು ಎತ್ತಿಹಿಡಿಯುವ ಚಿತ್ರಣವನ್ನು ಈ ಮೂಲಕ ಬಿಂಬಿಸಲಾಗಿದೆ. ಹಾಗೇ ಈ ಸಂದೇಶವು ಎಲ್ಲರನ್ನೂ ತಲುಪಿ ಬಂಧುತ್ವ ಬೆಳೆಯಲಿ ಎಂಬ ಸದಾಶಯ ಇದರಲ್ಲಿದೆ.
ದಸರಾ ಆರಂಭವಾಗುತ್ತಿದ್ದಂತೆ ಸಿರೋ-ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕುಝಿಯವರು ಶ್ರೀಕ್ಷೇತ್ರ ಕುದ್ರೋಳಿಗೆ ಆಗಮಿಸಿದ್ದರು. ಈ ವೇಳೆ ಅವರು ಜಾತಿ ಮತ ಬೇಧವಿಲ್ಲದೆ ನಡೆಯುತ್ತಿರುವ ಉತ್ಸವ ಮಾದರಿ ಎಂದು ಹರ್ಷ ವ್ಯಕ್ತಪಡಿಸಿದರು. ಇದೀಗ ದಸರಾ ಶೋಭಾಯಾತ್ರೆಯಲ್ಲಿ ಕ್ರೈಸ್ತ ಬಾಂಧವರ ಟ್ಯಾಬ್ಲೊ ಪಾಲ್ಗೊಂಡಿದ್ದು ಧರ್ಮಸಾಮರಸ್ಯಕ್ಕೆ ಮುನ್ನುಡಿ ಬರೆದಂತಾಗಿದೆ. ಅಲ್ಲದೆ ಕರಾವಳಿ ಕೋಮುಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯನ್ನು ಕಳಚಿ ಕೋಮುಸೌಹಾರ್ದತೆಯ ಭಾವಕ್ಕೆ ಸಾಕ್ಷಿಯಾದಂತಾಗಿದೆ.