ತುಳು ಭಾಷೆ ತುಳಿದು ಕನ್ನಡ ಹೇರಿಕೆ ಆರೋಪಿಸಿ ಪ್ರತಿಭಟನೆ
ಮಂಗಳೂರು: ತುಳುನಾಡಿನಲ್ಲಿ ತುಳು ಭಾಷೆಯನ್ನು ತುಳಿದು ಕನ್ನಡ ಹೇರಿಕೆ ಮಾಡಲಾಗ್ತಿದೆ ಎಂದು ಆರೋಪಿಸಿ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ತುಳು ಭಾಷಾ ಸಂರಕ್ಷಣಾ ಸಮಿತಿ ಕುಡ್ಲ ಇಂದು ಪ್ರತಿಭಟನೆ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ತುಳುಭಾಷೆಗೆ ಸ್ಥಾನ ಮಾನ ತರುವ ಬಗ್ಗೆ ಹೇಳಿದ್ದರು. ಆದರೆ ಇಲ್ಲಿಯವರೆಗೆ ಅವರು ತಾಂತ್ರಿಕ ದೋಷ ಅಂತ ಹೇಳುತ್ತಾ ಬರುತ್ತಿದ್ದಾರೆ. ಆದರೆ ಮೊನ್ನೆ, ಯಾವುದೇ ಭಾಷೆಗೆ ಅಧಿಕೃತ ಭಾಷೆ ಎಂದು ಸ್ಥಾನ ಮಾನ ಕೊಡಲು ಸಾಧ್ಯವಿಲ್ಲ, ಇಲ್ಲಿ ಕನ್ನಡ ಭಾಷೆ ಮಾತ್ರ ಅಧಿಕೃತ ಎಂದಿದ್ದಾರೆ. 2 ಕೋಟಿಗೂ ಅಧಿಕ ಜನರು ಮಾತನಾಡುವ ಭಾಷೆಗೆ ಅಧಿಕೃತ ಸ್ಥಾನ ಮಾನ ಯಾಕಿಲ್ಲ ಎಂದು ಪ್ರಶ್ನಿಸಿದರು.
ಇನ್ನೂ ಪ್ರತಿಭಟನಾಕಾರರ ಮನವಿ ಆಲಿಸಿದ ಶಾಸಕ ವೇದವ್ಯಾಸ್ ಕಾಮತ್, ಈ ಬಗ್ಗೆ ಸಚಿವ ಸುನೀಲ್ ಕುಮಾರ್ ಜೊತೆಗೆ ಚರ್ಚಿಸಿ, ಪ್ರಾಮಾಣಿಕವಾಗಿ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸುತ್ತೇವೆ. ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡಿದರು.

















