ಮಣಿಪುರ ವಿಚಾರ : ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು : ಉಡುಪಿ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಸಮುದಾಯದಿಂದ ಮನವಿ

ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿಚಾರದಲ್ಲಿ ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಸಮುದಾಯ ಪರವಾಗಿ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ, ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಹಿಂಸಾಚಾರ ಮತ್ತು ಜೀವ ಹಾನಿ, ಆಸ್ತಿಪಾಸ್ತಿಗಳ ನಷ್ಟದಿಂದ ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ. ಬಹುಸಂಖ್ಯಾತ ಮಣಿಪುರಿಗಳು ಮತ್ತು ಅಲ್ಪಸಂಖ್ಯಾತ ಬುಡಕಟ್ಟು ಜನರು ನಡುವಿನ ಅಂತರ-ಸಮುದಾಯ ಸಂಘರ್ಷದ ನೆಪದಲ್ಲಿ ವಿಸ್ತೃತ ಇಂಫಾಲ್ ಕಣಿವೆಯಲ್ಲಿ ಬಹುತೇಕ ಎಲ್ಲಾ ಚರ್ಚ್‍ಗಳನ್ನು ಸುಟ್ಟುಹಾಕಲಾಗಿದೆ, ಧ್ವಂಸಗೊಳಿಸಲಾಗಿದೆ ಅಥವಾ ಅಪವಿತ್ರಗೊಳಿಸಲಾಗಿದೆ.ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಅದರ ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ವೇಳೆ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಅವರು ಸಂಬಂಧಪಟ್ಟವರಿಗೆ ಮನವಿಯನ್ನು ತಲುಪಿಸಲಾಗುವುದು ಎಂದರು.

ಮನವಿ ನೀಡಿದ ನೀಯೋಗದಲ್ಲಿ ಧರ್ಮಪ್ರಾಂತ್ಯದ ಕುಲಪತಿ ವಂ|ಡಾ|ರೋಶನ್ ಡಿಸೋಜಾ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಇದರ ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಡಿ’ಆಲ್ಮೇಡಾ, ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿ’ಸೋಜಾ, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ, ಭಾರತೀಯ ಕ್ರೈಸ್ತ ಒಕ್ಕೂಟ ಇದರ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.

Related Posts

Leave a Reply

Your email address will not be published.