ಹೊಸಂಗಡಿ-ವರ್ಕಾಡಿ-ಆನೆಕಲ್ಲು ರಸ್ತೆ ಬದಿ ಅಪಾಯಕಾರಿ ಮರಗಳು

ಮಂಜೇಶ್ವರ: ಹೊಸಂಗಡಿ – ವರ್ಕಾಡಿ – ಆನೆಕಲ್ಲು ರಸ್ತೆಯ ವಿವಿಧ ಕಡೆ ರಸ್ತೆ ಬದಿ ಬೃಹತ್ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ಇದ್ದು, ಇನ್ನು ಕೆಲವು ಕೊಂಬೆಗಳು ಮುರಿದು ಬೀಳುವ ಹಂತದಲ್ಲಿವೆ. ಮಳೆಗಾಲ ಆರಂಭಗೊಂಡ ಬಳಿಕ ಈಗಾಗಲೇ ಹಲವಾರು ಅನಾಹುತಗಳು ಸಂಭವಿದೆ. ಇಲಾಖೆ ಈ ಬಗ್ಗೆ ಎಚ್ಚರ ವಹಿಸದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.
ಮಂಜೇಶ್ವರದ ಬಹುತೇಕ ಪ್ರದೇಶಗಳಲ್ಲೂ ಒಣಗಿದ, ರೋಗಗ್ರಸ್ತ ಮತ್ತು ಬೃಹತ್ ಮರಗಳು, ರೆಂಬೆಗಳನ್ನು ಮಳೆಗಾಲಕ್ಕೆ ಮುನ್ನವೇ ತೆರವುಗೊಳಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಗಾಳಿ, ಮಳೆಯಾಗುವ ಸಂದರ್ಭ ಅದರಲ್ಲೂ ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯಕಾರಿ. ಕೆಲವೊಂದು ಮರಗಳು ಬುಡ ಸಮೇತ ನೆಲಕ್ಕುರುಳಿದರೆ, ಇನ್ನು ಕೆಲವು ಕಡೆ ಗಾಳಿ ಜೋರಾಗಿ ಬೀಸಿದಾಗ ರೆಂಬೆ ಮುರಿದು ಬೀಳುವ ಸಾಧ್ಯತೆ ಇದೆ.

ಇನ್ನು ಕೆಲವು ಕಡೆ ರಸ್ತೆ ಬದಿಗಳಲ್ಲಿ ಅಕೇಶಿ ಮರಗಳು ತುಂಬಾ ಅಪಾಯ ಸ್ಥಿತಿಯಲ್ಲಿದ್ದು ಜೋರು ಗಾಳಿ, ಮಳೆಗೆ ಬುಡ ಸಮೇತ ನೆಲಕ್ಕುರುಳುತ್ತಿವೆ. ಬಹುತೇಕ ಸಂದರ್ಭ ವಿದ್ಯುತ್ ತಂತಿಗಳ ಮೇಲೆ ಮರ ಮುರಿದು ಬಿದ್ದು ಸ್ಥಳೀಯರಿಗೆ ವಿದ್ಯುತ್ ಕೂಡ ಕಡಿತಗೊಳ್ಳುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಳೆ ಗಾಲಕ್ಕೆ ಮುಂಚಿತವಾಗಿಯೇ ಅಪಾಯಕಾರಿ ಮರಗಳನ್ನು ತೆರವು ಗೊಳಿಸುವಂತೆ ವಿನಂತಿಸಿ ಕೊಂಡರೂ ಯಾರೂ ಇತ್ತ ಕಡೆ ತಿರುಗಿಯೂ ನೋಡಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.
ಭೂಮಿಯ ಮೇಲ್ಭಾಗದಲ್ಲಿ ಎಷ್ಟು ವಿಶಾಲವಾಗಿ ರೆಂಬೆ-ಕೊಂಬೆಗಳು ಚಾಚಿರುತ್ತವೆಯೋ, ಭೂಮಿಯೊಳಗೆ ಅದರ ಬೇರುಗಳ ಜಾಲವೂ ಅಷ್ಟೆ ಹರಡಿರಬೇಕು. ಇಲ್ಲದಿದ್ದರೆ, ಸಮತೋಲನ ತಪ್ಪುತ್ತದೆ. ಬೇರುಗಳಿಗೆ ಹೆಚ್ಚಿನ ಹಾನಿ ಆದರೆ ಮರ ಸಾಯುತ್ತದೆ. ಇದೇ ಪರಿಸ್ಥಿತಿ ನಗರದ ಮರಗಳಿಗೆ ಉಂಟಾಗಿದೆ.

ಅಂಗಡಿ-ಮುಂಗಟ್ಟುಗಳು, ಜಾಹೀರಾತು ಫಲಕಗಳಿಗೆ ಅಡ್ಡಿಯಾಗುವ ಮರಗಳಿಗೆ ವಿಷವಿಟ್ಟು ಸಾಯಿಸಲಾಗುತ್ತಿದೆ. ಮನೆ ಛಾವಣಿ ಮೇಲೆ ಎಲೆಗಳು ಉದುರುವ ಕಾರಣಕ್ಕೆ ಮತ್ತು ವಿದ್ಯುತ್ ಸಿಬ್ಬಂದಿ ವಿದ್ಯುತ್ ತಂತಿಗಳಿಗೆ ತಾಗುವ ರೆಂಬೆಗಳನ್ನು ಮನಸೋಇಚ್ಛೆ ಕಡಿದು ಬಿಸಾಡುತ್ತಿದ್ದಾರೆ. ರೆಂಬೆಗಳನ್ನು ವೈಜ್ಞಾನಿಕವಾಗಿ ಕತ್ತರಿಸುತ್ತಿಲ್ಲ. ಇದರಿಂದಾಗಿ, ಸಮತೋಲನ ಕಳೆದುಕೊಂಡು ಮಳೆಗಾಲದಲ್ಲಿ ನೆಲಕ್ಕುರುಳುತ್ತಿವೆ. ಸಂಬಂಧ ಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
