ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಎಂ.ಜಿ.ರೋಡ್ ತಿರುವು ರಸ್ತೆಯಲ್ಲಿ ಕೃತಕ ನೆರೆ
ಮಂಗಳೂರಿನ ಎಂ.ಜಿ.ರೋಡ್ ಬಲ್ಲಾಳ್‍ಬಾಗ್‍ನಿಂದ ತಿರುವು ಪಡೆದ ರಸ್ತೆಯ ಅಂಚಿನಲ್ಲಿ ಕೃತಕ ನೆರೆ ಸೃಷ್ಠಿಯಾಗಿದೆ. ಈ ರಸ್ತೆಯಲ್ಲಿ ನೀರು ಹರಿಯಲು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ರಸ್ತೆಯಂಚಿನಲ್ಲೇ ನಿಂತು ವ್ಯಾಪಾರ ಮಳಿಗೆಗಳ ಒಳಗೆ ನುಗ್ಗುತ್ತಿದೆ.
ಮಂಗಳೂರಿನ ಬಲ್ಳಾಲ್‍ಬಾಗ್ ಎಂ.ಜಿ.ರೋಡ್ ರಸ್ತೆಯಿಂದ ತಿರುವು ಪಡೆದ ರಸ್ತೆಯ ಕೋಡಿಯಾಲ್ ಗುತ್ತು ಜನತಾ ಡೀಲಕ್ಸ್ ಹೋಟೆಲ್ ಬಳಿ ಚಿಕ್ಕ ಮಳೆ ಬಂದರೆ ಸಾಕು, ರಸ್ತೆಯಂಚಿನಲ್ಲೇ ನೀರು ನಿಂತು ಹತ್ತಿರದಲ್ಲಿರುವ ವ್ಯಾಪಾರ ಮಳಿಗೆಗಳ ಒಳಗೆ ನುಗ್ಗುತ್ತಿದೆ. ಇದರಿಂದಾಗಿ ಮಳಿಗೆಗಳಲ್ಲಿರುವ ಸಾಮಾಗ್ರಿಗಳು ಹಾನಿಗೊಳಗಾಗಿ ವ್ಯಾಪಾರಸ್ಥರಿಗೆ ನಷ್ಟವನ್ನುಂಟು ಮಾಡುತ್ತಿದೆ. ರಸ್ತೆಯಂಚಿನಲ್ಲೇ ಕೆರೆಯ ರೂಪದಲ್ಲಿ ನೀರು ನಿಲ್ಲುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.
ಈ ರಸ್ತೆ ಡಾಮರೀಕರಣವಾಗಿದ್ದ ಸಂದರ್ಭದಲ್ಲಿ ಸಮತಟ್ಟಾಗಿದ್ದರಿಂದ ನೀರು ಸಮರ್ಪಕವಾಗಿ ಹರಿದು ಹೋಗುತ್ತಿತ್ತು. ನಂತರ ಈ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಯಿತು. ಎತ್ತರವಾಗಿ ಕಾಂಕ್ರೀಟಿಕರಣ ಮಾಡಿದ್ದರಿಂದ ನೀರು ಹರಿದು ಹೋಗಲಾಗದೆ ರಸ್ತೆಯಂಚಿನಲ್ಲೇ ನಿಲ್ಲವಂತಾಗಿದೆ. ಅಲ್ಲದೆ ಸೂಕ್ತವಾದ ಚರಂಡಿ ವ್ಯವಸ್ಥೆಯೂ ಇಲ್ಲದಿರುವುದರಿಂದ ನೀರು ನಿಂತು ಹಲವು ರೀತಿಯ ಸಮಸ್ಯೆಗಳನ್ನು ಸೃಷ್ಠಿಸಿದೆ.
ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿರುವ ಸ್ಥಳೀಯರು, ಮಂಗಳೂರು ಮಹಾನಗರ ಪಾಲಿಕೆ ಮತ್ತು ಸಂಬಂಧಪಟ್ಟವರು ತಕ್ಷಣ ಎಚ್ಚೆತ್ತು ಸಮಸ್ಯೆಯನ್ನು ಪರಿಹರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.