ಮೂಡುಬಿದಿರೆ: ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ

ಮೂಡುಬಿದಿರೆ: ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಅಗತ್ಯವಾಗಿ ಬೇಕು. ಪಿಡಿಗಳು ಅಗತ್ಯವಾಗಿ ಬೇಕು. ಸಮಸ್ಯೆಗಳು ಎಲ್ಲಾ ಕಡೆಗಳಲ್ಲೂ ಇರುತ್ತವೆ ಆದರೆ ಶಿಕ್ಷಕರು ಶಾಲೆಗಳಿಗೆ ಬರುವಾಗ ಟೆನ್ಷನ್ ನಲ್ಲಿ ಬರಬೇಡಿ. ದೈಹಿಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದರೆ ದೈಹಿಕ ಶಿಕ್ಷಕರ ಒತ್ತಡ ಕಡಿಮೆಯಾಗಲಿದೆ. ಇದರಿಂದ ಪರೋಕ್ಷವಾಗಿ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿದಂತ್ತಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.

ಅವರು ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ದ.ಕ ಜಿಲ್ಲಾ ಶಾಖೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸ್ಕೌಟ್-ಗೈಡ್ಸ್ ಕನ್ನಡ ಭವನದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ, ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ದೈಹಿಕ ಶಿಕ್ಷಣ ಬೀಷ್ಮ ಮತ್ತು ಕರುನಾಡ ಕ್ರೀಡಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಶಿಕ್ಷಕರ ಹಲವು ಬೇಡಿಕೆಗಳು ಸರ್ಕಾರದ ಮುಂದಿದೆ. ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆಯಿತ್ತರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಡಹಂತದಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಡಿಮೆ ಮಕ್ಕಳಿರುವ ಶಾಲೆಯಿಂದ ಕ್ರೀಡಾ ಶಿಕ್ಷಕರನ್ನು ವರ್ಗಾಯಿಸುವ ಕ್ರಮ ಸರಿಯಲ್ಲ ಎಂದರು.

ಬಸವರಾಜ ಹೊರಟ್ಟಿ ಅವರಿಗೆ ಕರುನಾಡ ದೈಹಿಕ ಶಿಕ್ಷಣ ಭೀಷ್ಮ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರಿಗೆ ಕರುನಾಡ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿದ್ದು, ಮೋಹನ ಆಳ್ವರ ಪರವಾಗಿ ಪ್ರಾಂಶುಪಾಲ ಡಾ.ಕುರಿಯನ್ ಪ್ರಶಸ್ತಿ ಸ್ವೀಕರಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇ ಗೌಡ, ಮಾಜಿ ಶಾಸಕರಾದ ಪುಟ್ಟಣ್ಣ, ಅರುಣ್ ಚಹಾಪುರ, ಕೆಎಂಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯಕ್, ರಾಷ್ಟ್ರೀಯ ಕ್ರೀಡಾಪಟು ಬಾಲಂದರ್ ಸಿಂಗ್, ಸಿಇಟಿ ಮಂಗಳೂರು ವಿಭಾಗದ ಪ್ರಾಂಶುಪಾಲ ಸಿಪ್ರಿಯನ್ ಮೊಂತೆರೊ, ಡಯಾಟ್ ಪ್ರಾಂಶುಪಾಲೆ ರಾಜಲಕ್ಷ್ಮೀ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಕೆ ರಘು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.