ಹಿರಿಯ ಯಕ್ಷಗಾನ ಕಲಾವಿದ ಕಟ್ಟಣಿಗೆ ಸಂಜೀವ ಪ್ರಭು ನಿಧನ

ಮೂಡುಬಿದಿರೆ: ಹಿರಿಯ ಯಕ್ಷಗಾನ ಕಲಾವಿದ ಪ್ರಸಂಗಕರ್ತ ಇರುವೈಲು ಕಟ್ಟಣಿಗೆ ಸಂಜೀವ ಪ್ರಭು(83) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಇರುವೈಲು ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿ, ಸೇವಾ ರೂಪದಲ್ಲಿ ಕಟೀಲು ಮತ್ತು ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಇರುವೈಲು ಕ್ಷೇತ್ರ ಮಹಾತ್ಮೆ, ನಾಗಲಿಂಗೇಶ್ವರ ಮಹಿಮೆ, ರಕ್ತೇಶ್ವರಿ ಕಾರ್ಣಿಕ ಸೇರಿದಂತೆ ಹಲವು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಸಂಜೀವ ಪ್ರಭು ಅವರು ವೃತ್ತಿಯಲ್ಲಿ ಪುರೋಹಿತರಾಗಿ, ಕುಡಾಲ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದ ಹಿರಿಯ ಮಾರ್ಗದರ್ಶಕರಾಗಿದ್ದರು. ಹಲವಾರು ಸಂಘ-ಸಂಸ್ಥೆಗಳು ಇವರ ಯಕ್ಷ ಸೇವೆಯನ್ನು ಗುರುತಿಸಿ ಗೌರವಿಸಿದ್ದವು, ಇರುವೈಲು ಮೇಳದ ವತಿಯಿಂದ ಯಕ್ಷಗುರು ಎಂಬ ಬಿರುದು ನೀಡಿ ಗೌರವಸಲ್ಪಟ್ಟಿದ್ದರು. ಮೃತರು ಪತ್ನಿ, ನಾಲ್ವರು ಪುತ್ರಿಯರು ಮತ್ತು ಇಬ್ಬರು ಪುತ್ರರನ್ನು ಹಾಗೂ ಶಿಷ್ಯರನ್ನು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
