ಮೂಡುಬಿದಿರೆ ಗಣೇಶೋತ್ಸವಕ್ಕೆ ವಜ್ರ ಮಹೋತ್ಸವ
ಮೂಡುಬಿದಿರೆ: ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಸಮಾಜ ಮಂದಿರದಲ್ಲಿ ಪೂಜಿಸಲ್ಪಡುವ ಮೂಡುಬಿದಿರೆ ಗಣೇಶೋತ್ಸವವು ಈ ವರ್ಷ ವಜ್ರಮಹೋತ್ಸವವನ್ನು ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ ಗಣೇಶೋತ್ಸವ ಸಮಿತಿ, ಪವರ್ ಫ್ರೆಂಡ್ಸ್ ಬೆದ್ರ ಮತ್ತು ಸಮಾಜಮಂದಿರ ಸಭಾ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಮರುಜೋಡಣೆಯ ತಪಾಸಣಾ ಉಚಿತ ಶಿಬಿರ ಹಾಗೂ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಆಗಸ್ಟ್ 6ರಂದು ನಡೆಯಲಿದೆ.
ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸಮಾಜ ಮಂದಿರದ ಮೀಟಿಂಗ್ ಹಾಲ್‍ನಲ್ಲಿ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಹಿರಿಯ ಅಧೀಕ್ಷಕ ನವೀನ್ ಚಂದರ್ ತಿಳಿಸಿದರು.
ಶ್ರೀನಿವಾಸ ಆಸ್ಪತ್ರೆ ಮುಕ್ಕ ಸುರತ್ಕಲ್ ಸಹಯೋಗದೊಂದಿಗೆ ಆಗಸ್ಟ್ 6ರಂದು ಮೊಣಕಾಲು ಮತ್ತು ಸೊಂಟದ ಕೀಲು ಮರುಜೋಡಣೆಯ ತಪಾಸಣಾ ಉಚಿತ ಶಿಬಿರ ಹಾಗೂ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ, ಅಂಚೆ ಇಲಾಖೆಯ ಜನೋಪಯೋಗಿ ಸೇವಾ ಸೌಲಭ್ಯ ನೋಂದಣಿ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ. ಎಂ ಮಾತನಾಡಿ ಐದು ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು, ಸೆ.19ರಂದು ಕೊನೆಯ ದಿನ ಅಷ್ಟೋತ್ತರ ಸಹಸ್ರ ನಾಲಿಕೇರ ಅಷ್ಟದ್ರವ್ಯಗಣಯಾಗ ನಡೆಯಲಿದೆ ಹಾಗೂ ವಿಶೇಷ ಟ್ಯಾಬ್ಲೋಗಳಿಂದ ವೈಭವಯುತವಾದ ಶೋಭಾಯಾತ್ರೆ ನಡೆಯಲಿದೆ. ಐದು ದಿನವೂ ಸಾರ್ವಜನಿಕ ಅನ್ನಸಂತರ್ಪಣೆಯಿದೆ.
ವಜ್ರ ಮಹೋತ್ಸವದಂಗವಾಗಿ ಕಳೆದ ಒಂದು ವರ್ಷದಿಂದ ಹಲವು ಸಾಮಾಜಿಕ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದರು.
ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ, ಸಮಿತಿ ಸಂಚಾಲಕ ರಾಜಾರಾಮ್ ನಾಗರಕಟ್ಟೆ, ಗಣೇಶೋತ್ಸವ ಸಮಿತಿಯ, ಪವರ್ ಫ್ರೆಂಡ್ಸ್ ನ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.