ಬಾಹ್ಯಾಕಾಶಕ್ಕೆ ಮೂರನೆಯ ದಾಪುಗಾಲು

ಭಾರತದ ಬಾಹ್ಯಾಕಾಶದ ಕನಸನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಕಾರಪಡಿಸಿಕೊಂಡ ಮಹಿಳೆಯರು ಎಂದರೆ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್. ಭಾರತೀಯ ಮೂಲದ ಅಮೆರಿಕದ ಪ್ರಜೆಗಳು ಇವರು. ಈಗ ಸುನಿತಾ ವಿಲಿಯಮ್ಸ್ ಅವರು ಮೂರನೆಯ ಬಾರಿಗೆ ಬಾಹ್ಯಾಕಾಶಕ್ಕೆ ನೆಗೆದಿದ್ದಾರೆ. ಕಲ್ಪನಾ ಬದುಕು ಅರ್ಧದಲ್ಲೇ ಉರಿದು ಗಗನದ ತಾರೆಯಾಯಿತು. ಇಲ್ಲದಿದ್ದರೆ ಅವರು ಕೂಡ ಮತ್ತಷ್ಟು ಬಾಹ್ಯಾಕಾಶ ಸಾಧನೆಗಳನ್ನು ಮಾಡುತ್ತಿದ್ದರು.

ಕಲ್ಪನಾ ಚಾವ್ಲಾ ಭಾರತ ಮೂಲದ ಮೊದಲ ಮಹಿಳಾ ಗಗನಯಾತ್ರಿ. ಭಾರತದ ಹರಿಯಾಣ ಮೂಲದವರು. ಹರಿಯಾಣಾದ ಕರ್ನಾಲ್‍ನಲ್ಲಿ 1962ರಲ್ಲಿ ಜನಿಸಿದವರು ಕಲ್ಪನಾ. ಆಗ ರಶಿಯಾ ಮತ್ತು ಅಮೆರಿಕಗಳು ಬಾಹ್ಯಾಕಾಶ ವಿಜಯದ ಪೈಪೋಟಿ ನಡೆಸಿದ್ದವು. ಅದನ್ನು ಕೇಳುತ್ತ, ಓದುತ್ತ ಬೆಳೆದ ಕಲ್ಪನಾಳಿಗೆ ಬಾಲ್ಯದಿಂದಲೇ ಬಾಹ್ಯಾಕಾಶದ ಕನಸು. ತಾರಾಲೋಕದಲ್ಲಿ ಸಾಹಸ ಮಾಡುವ ಕನಸು. ಪಂಜಾಬ್ ಎಂಜಿನಿಯರಿಂಗ್ ಕಾಲೇಜಿಗೆ ವೈಮಾನಿಕ ತಂತ್ರಜ್ಞಾನ ಓದಲು ಸೇರಬೇಕೆಂದಾಗ ಮನೆಯಲ್ಲಿ ಯಾರ ಬೆಂಬಲವೂ ಸಿಗಲಿಲ್ಲ.

ಹೇಗೋ ಅಣ್ಣನನ್ನು ಪುಸಲಾಯಿಸಿ ಕೋರ್ಸಿಗೆ ಸೇರಿದಾಗ ಏರೋನಾಟಿಕಲ್ ಎಂಜಿನಿಯರಿಂಗ್ ಓದುತ್ತಿದ್ದ ಹುಡುಗಿ ಇವಳು ಒಬ್ಬಳು ಮಾತ್ರ. ಅಸಡ್ಡೆ ಮಾಡಿದ ಹುಡುಗರಿಗೆ ಆರೇ ತಿಂಗಳಲ್ಲಿ ತನ್ನ ಜಾಣ್ಮೆಯ ಮೂಲಕ ಉತ್ತರ ನೀಡಿದಳು. ಕೊನೆಗೆ ಅವರೆಲ್ಲ ಗತಿಗೆಟ್ಟು ಆಕೆಯನ್ನೇ ನಾಯಕಿಯಾಗಿ ಆರಿಸಿದರು. ಆಕೆಯ ಕನಸು ನಾಸಾ. ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಎಡ್ಮಿನಿಸ್ಟ್ರೇಶನ್ ಅರ್ಥಾತ್ ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಸಂಸ್ಥೆ. ಪದವಿ ಮುಗಿಯುತ್ತಲೇ ಕಲ್ಪನಾ ಪಡೆದ ಅಂಕಗಳು ತಡೆಯಿಲ್ಲದೆ ಅವಳನ್ನು ಯುಎಸ್‍ಎ ತೆಕ್ಕೆಗೆ ಒಯ್ದವು.

1982ರಲ್ಲಿ ಯುಎಸ್‍ಎಗೆ ಹೋದ ಕಲ್ಪನಾ ಚಾವ್ಲಾ 1984ರಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‍ನಲ್ಲಿ ಮಾಸ್ಟರ್ಸ್ ಪದವಿ ಪಡೆದರು. 1988ರಲ್ಲಿ ನಾಸಾದ ಏಮೆಸ್ ಸಂಶೋಧನಾ ಕೇಂದ್ರದಲ್ಲಿ ಕಲ್ಪನಾರಿಗೆ ಸುಲಭದಲ್ಲಿ ಕೆಲಸ ಸಿಕ್ಕಿತು. ನಾನಾ ಸಂಶೋಧನೆಗಳಲ್ಲಿ ಈಡುಗೊಂಡ ಅವರು ಬೇಗನೆ ಫ್ಲೈಟ್ ಇನ್‍ಸ್ಟ್ರಕ್ಟರ್ ಆದರು.

1997ರ ನವೆಂಬರ್ 19ರಂದು ನಾಸಾದ ಸ್ಪೇಸ್ ಶಟಲ್ ಕೊಲಂಬಿಯಾದಲ್ಲಿ ಬಾಹ್ಯಾಕಾಶಕ್ಕೇರಿದ ಆರು ಜನರಲ್ಲಿ ಕಲ್ಪನಾ ಚಾವ್ಲಾ ಒಬ್ಬರು. ನೀವು ನಿಮ್ಮ ಬುದ್ಧಿಮತ್ತೆಯ ಮೇಲಿದ್ದೀರಿ ಎಂದು ಆ ಸಂದರ್ಭದಲ್ಲಿ ಆಕೆ ಹೇಳಿದರು. ಕಲ್ಪನಾ ಚಾವ್ಲಾ 1.7 ಕೋಟಿ ಕಿಲೋಮೀಟರ್ ಬಾಹ್ಯಾಕಾಶದಲ್ಲಿ ಸಾಗಿದರು. ಅದು ಭೂಮಿಯ ಸುತ್ತ 252 ಬಾರಿ ಸುತ್ತಿದಷ್ಟು ಆಗುತ್ತದೆ. ಬಾಹ್ಯಾಕಾಶದಲ್ಲಿ ಇವರು 15 ದಿನ ಮತ್ತು 16 ಗಂಟೆ ಕಳೆದು ಹಿಂತಿರುಗಿದರು.

2003ನೇ ಇಸವಿಯಲ್ಲಿ ಮತ್ತೆ ಕಲ್ಪನಾ ಚಾವ್ಲಾರು ಹೊಸ ಕೊಲಂಬಿಯಾ ಬಾಹ್ಯಾಕಾಶ ಯಾತ್ರೆಗೆ ಆಯ್ಕೆಯಾದರು. ಅದಾಗಲೇ ಅವರು ಜೀನ್ ಪಿಯರ್ ಹ್ಯಾರಿಸನ್ ಅವರನ್ನು ಲಗ್ನವಾಗಿದ್ದರು. ಹಲವು ಬಾಹ್ಯಾಕಾಶ ಸಂಶೋಧನೆಗಳನ್ನು ಇವರ ತಂಡ ಬಾನಂಗಳದಾಚೆ ನಡೆಸಿತು. ಅದರೆ ಕೊಲಂಬಿಯಾ ಶಟಲ್ ಬಾಹ್ಯಾಕಾಶ ನೌಕೆಯಲ್ಲಿ ಬಿರುಕು ಕಂಡುಬಂದಿತು. 2003ರ ಫೆಬ್ರವರಿ 1ರಂದು ಕೊಲಂಬಿಯಾ ಶಟಲ್ ಟೆಕ್ಸಾಸ್‍ಗೆ ಹಿಂತಿರುಗುವಾಗ ವಾತಾವರಣ ಪ್ರವೇಶಿಸುವಾಗ ಉರಿದು ಬೂದಿಯಾಯಿತು. ಅದರಲ್ಲಿದ್ದ ಕಲ್ಪನಾ ಚಾವ್ಲಾ ಮತ್ತು ಒಟ್ಟು ಏಳು ಮಂದಿ ಗಗನದಲ್ಲೇ ಉರಿದು ಬೂದಿಯಾಗಿ ಹೋದರು.

ಒಂದು ತಾರೆಗೆ ಕಲ್ಪನಾ ಚಾವ್ಲಾರ ಹೆಸರು ಇಡಲಾಗಿದೆ. ನ್ಯಾಶನಲ್ ಜಿಯಾಗ್ರಫಿಕ್ ಸಾಕ್ಷ್ಯ ಚಿತ್ರವೂ ಬಂದಿದೆ. ‘ಎ ಮಿಲಿಯನ್ಸ್ ಮೈಲ್ಸ್ ಅವೇ’ ಚಲನಚಿತ್ರದಲ್ಲಿ ಕಲ್ಪನಾ ಚಾವ್ಲಾರ ಪಾತ್ರವನ್ನು ಸರಯು ಬ್ಲೂ ನಿರ್ವಹಿಸಿದ್ದರು.

ಇನ್ನು ಸುನಿತಾ ವಿಲಿಯಮ್ಸ್‍ರು ಭಾರತೀಯ ಮೂಲದ ತಂದೆ ಹೊಂದಿದ್ದರೂ ಅವರು ಹುಟ್ಟಿದ್ದು ಯುಎಸ್‍ಎಯ ನೀಧಮ್‍ನಲ್ಲಿ. ತಂದೆ ವೈದ್ಯ ಗುಜರಾತ್ ಮೂಲದವರು; ತಾಯಿ ಯುಎಸ್‍ಎಯ ಉರ್ಸುಲಿನ್ ಬೋನಿ. ಎಂಜಿನಿಯರಿಂಗ್ ಮ್ಯಾನೇಜ್‍ಮೆಂಟ್ ಮಾಸ್ಟರ್ ಪದವಿ ಪಡೆದ ಬಳಿಕ 1987ರಲ್ಲಿ ಅಮೆರಿಕದ ನೌಕಾ ಪಡೆ ಸೇರಿಕೊಂಡರು. ಅಲ್ಲಿ ಅವರು ಈಗ ಹಿರಿಯ ಅಧಿಕಾರಿ. 1998ರಲ್ಲಿ ಸುನಿತಾ ವಿಲಿಯಮ್ಸ್ ನಾಸಾದಲ್ಲಿ ತನ್ನ ಬಾಹ್ಯಾಕಾಶ ತರಬೇತಿ ಆರಂಭಿಸಿ ಯಶಸ್ವಿಯಾಗಿ ಮುಗಿಸಿದರು.

2006ರಲ್ಲಿ ಐಎಸ್‍ಎಸ್- ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಅಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡರು. 2007ರ ಫೆಬ್ರವರಿಯಲ್ಲಿ ಅವರು ಮೈಕೆಲ್ ಲೋಪೆಜ್ ಅಲೆಗ್ರಿಯಾ ಜೊತೆಯಲ್ಲಿ ಮೂರು ಬಾರಿ ಬಾಹ್ಯಾಕಾಶದಲ್ಲಿ ನಡೆದು ಯಶಸ್ವಿಯಾದರು. ಮೂರನೆಯ ನಡಿಗೆ ವೇಳೆ ಅವರು ಆರೂವರೆ ಗಂಟೆಗಳ ಕಾಲ ಬಾಹ್ಯಾಕಾಶದಲ್ಲೇ ತೇಲುತ್ತ ದಾಖಲೆ ಮಾಡಿದರು. ಒಟ್ಟು ನಾಲ್ಕು ಬಾಹ್ಯಾಕಾಶ ನಡಿಗೆಗಳಲ್ಲಿ 29 ಗಂಟೆ 17 ನಿಮಿಷ ಗಗನದಲ್ಲಿ ತೇಲಿ ಹಳೆಯ ದಾಖಲೆ ಮುರಿದಿದ್ದರು. ಡಿಸೆಂಬರ್‍ನಲ್ಲಿ ಹಿಂತಿರುಗಿದಾಗ ಅವರು ಅತಿ ಹೆಚ್ಚು ಕಾಲ 500ಕ್ಕೂ ಹೆಚ್ಚು ದಿನ ಬಾಹ್ಯಾಕಾಶದಲ್ಲೆ ಕಳೆದ ಮಹಿಳೆ ಎಂಬ ದಾಖಲೆ ಬರೆದಿದ್ದರು.

ಬಾಹ್ಯಾಕಾಶದಲ್ಲಿ ಮೊದಲು ಮ್ಯಾರಥಾನ್ ಓಡಿದ ದಾಖಲೆ ಕೂಡ ಸುನಿತಾ ವಿಲಿಯಮ್ಸ್‍ರದಾಗಿದೆ. 2012ರಲ್ಲಿ ಮತ್ತೆ ಯುಎಸ್ ರಶಿಯಾ ಸಹಭಾಗಿತ್ವದ ಬಾಹ್ಯಾಕಾಶ ಸಂಶೋಧನೆಯಲ್ಲಿ ಅವರು ಈಡುಗೊಂಡರು. ಆಗ ಅವರೊಂದಿಗೆ ರಶಿಯಾದವರಲ್ಲದೆ ಜಪಾನಿನ ಅಕಿಹಿಟೊ ಹೊಸೈಡ್ ಎನ್ನುವ ಗಗನಯಾನಿ ಸಹ ಇದ್ದರು. 2012ರ ಸೆಪ್ಟೆಂಬರ್‍ನಲ್ಲಿ ಬಾಹ್ಯಾಕಾಶದಲ್ಲಿ ಟ್ರಯತ್ಲಾನ್ ಮಾಡಿದ ಮೊದಲಿಗರಾದರು ಸುನಿತಾ. ಪ್ರತಿರೋಧ ವ್ಯಾಯಾಮ ಸಾಧನಗಳನ್ನು ಬಳಸಿದ್ದು ಕೂಡ ಅವರ ಹೆಗ್ಗಳಿಕೆಯಾಗಿದೆ. ಏಳು ಬಾಹ್ಯಾಕಾಶ ನಡಿಗೆ, 50 ಗಂಟೆ 40 ನಿಮಿಷಗಳು.

ಪೋಲೀಸು ಅಧಿಕಾರಿ ಮೈಕೆಲ್ ಜೆ. ವಿಲಿಯಮ್ಸ್ ಸುನಿತಾರ ಗಂಡ. ಆರಂಭಿಕ ದಿನಗಳಲ್ಲಿ ಹೆಲಿಕಾಪ್ಟರ್ ಹಾರಿಸುತ್ತ ಪರಿಚಿತರಾದವರು ಇವರು. ತಾಯಿ ಸ್ಲೊವಾಕಿಯಾ, ತಂದೆ ಹಿಂದೂ, ಗಂಡ ಕ್ರಿಶ್ಚಿಯನ್ ಆದರೂ ಸುನಿತಾ ಕೆಲವು ಮೂಲ ಆಚರಣೆಗಳನ್ನು ಉಳಿಸಿಕೊಂಡಿರುವುದಾಗಿ ಹೇಳಲಾಗಿದೆ. ತಾಯಿಯ ಸ್ಲೊವೇಕಿಯಾಕ್ಕೆ ಹಲವು ಬಾರಿ ಹೋಗಿ ಅಲ್ಲಿ ವೈಜ್ಞಾನಿಕ ತರಬೇತಿ ನೀಡಿದ್ದಾರೆ. ಗಗನಯಾನಿ ನಗರಕ್ಕೆ ಸಾಕ್ಷಿಯಾಗಿದ್ದಾರೆ. 2013ರಲ್ಲಿ ಕೊಲ್ಕತ್ತದ ಸಯನ್ಸ್ ಸಿಟಿಗೆ ಭೇಟಿ ನೀಡಿದ್ದರು. ಈಗ ಮೂರನೆಯ ಬಾರಿ ಬಾಹ್ಯಾಕಾಶಮುಖಿಯಾಗಿದ್ದಾರೆ. ಹೊಸ ಸಾಹಸಕ್ಕೆ ತೆರೆದುಕೊಂಡಿದ್ದಾರೆ.

ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.