ಸರ್ವ ಧರ್ಮ ಸಮ್ಮೇಳನ : ಧರ್ಮ ಸಾಗರದಲ್ಲಿ ಸೌಹಾರ್ದತೆಯ ಅಲೆಗಳಾಗಿ ಸಾಗೋಣ – ಮುನಿ ಶ್ರೀ ರಶ್ನಿ ಕುಮಾರ್ ಜೀ

ಬೆಂಗಳೂರು: ನ, 6: ವಿಜಯನಗರಜ ಅರ್ಹಂ ಭವನದಲ್ಲಿ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಬೆಸೆಯುವ ಸರ್ವ ಧರ್ಮ ಸಮ್ಮೇಳನ ಹಾಗೂ ಸರ್ವಧರ್ಮ ಆಧ್ಯಾತ್ಮಿಕ ಸ್ನೇಹ ಮಿಲನ-2022 ಕಾರ್ಯಕ್ರಮ ಸಂತಸ, ಸಡಗರದಿಂದ ನೆರವೇರಿತು.
ಧರ್ಮ ಧರ್ಮಗಳ ನಡುವೆ, ಧಾರ್ಮಿಕ ಮುಖಂಡರ ಮಧ್ಯೆ ಪರಸ್ಪರ ಗೌರವ ನೀಡುವ, ಆಲಂಗಿಸಿಕೊಂಡು ಬೆನ್ನು ತಟ್ಟುವ, ಸಾಮರಸ್ಯದಲ್ಲಿ ನಿಮಗಿಂತ ನಾವೇ ಒಂದು ಹೆಜ್ಜೆ ಮುಂದೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಕಂಡು ಬಂತು. ಸಮ್ಮೇಳನದಲ್ಲಿ ವಿಶ್ವ ಮಾನವ ಸಂದೇಶ ಮೊಳಗಿತು.
ಜೈನ ಶ್ವೇತಾಂಬರ ತೇರಾಪಂಥ ಸಭಾ ಈ ಕಾರ್ಯಕ್ರಮ ಆಯೋಜಿಸಿತ್ತು. ಆಚಾರ್ಯ ಶ್ರೀ ಮಹಾಶ್ರಮಣ್ ಜೀ ಅವರ ಸುಶಿಷ್ಯರಾದ ಮುನಿ ಶ್ರೀ ರಶ್ಮಿ ಕುಮಾರ್ ಜೀ, ಮುನಿ ಶ್ರೀ ರತ್ನ ಕುಮಾರ್ ಜೀ ಸಾನಿಧ್ಯದಲ್ಲಿ ಮಾಜಿ ಸಚಿವ ಎಂ. ಕೃಷ್ಣಪ್ಪ, ಮಾಜಿ ಉಪ ಪೊಲೀಸ್ ಆಯುಕ್ತ ಬಿ.ಬಿ. ಅಶೋಕ್ ಕುಮಾರ್ ಸಮ್ಮೇಳನ ಉದ್ಘಾಟಿಸಿದರು.
ಮುನಿ ಶ್ರೀ ರಶ್ನಿ ಕುಮಾರ್ ಜೀ ಮಾತನಾಡಿ, ದೇಶದಲ್ಲಿ ಕೋಮು ಸಾಮರಸ್ಯ ಇಂದಿನ ಅಗತ್ಯವಾಗಿದ್ದು, ಎಲ್ಲಾ ಧರ್ಮೀಯರು ಕೈಜೋಡಿಸಿದಾಗ ಮಾತ್ರ ಕೋಮು ಸೌಹಾರ್ದತೆ ನೆಲೆಸಲು ಸಾಧ್ಯ. ಭಾರತ ಹಲವು ಭಾಷೆ, ಸಂಸ್ಕೃತಿ, ಸರ್ವ ಜನಾಂಗದ ತೋಟವಾಗಿದೆ. ಭಾರತ ಅವಿಭಕ್ತ ಕುಟುಂಬ. ನಮ್ಮಲ್ಲಿ ಒಡಲು ಸಲ್ಲದು. ಒಡಕು ಮೂಡಿಸುವ ಶಕ್ತಿಗಳಿಂದ ದೂರ ಇರುವುದು ಕ್ಷೇಮ ಎಂದರು.

ನಾವೀಗ 21 ನೇ ಶತಮಾನದ ಕಾಲು ಭಾಗ ಕಳೆದಿದ್ದು, ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಎಲ್ಲಾ ಧರ್ಮಗಳ ನಡುವೆ ಸೌಹಾರ್ದತೆ ಮೂಡಬೇಕು. ಸಮುದ್ರದಲ್ಲಿ ಸಹಸ್ರಾರು ಅಲೆಗಳು ನಿರಂತರವಾಗಿ ದಡ ಸೇರುತ್ತಲೇ ಇರುತ್ತದೆ. ನಾವು ಕೂಡ ಅಲೆಗಳಂತೆ. ಪರಸ್ಪರ ಒಬ್ಬರ ಭುಜಕ್ಕೆ ಮತ್ತೊಬ್ಬರು ಭುಜ ಕೊಟ್ಟು ಧರ್ಮ ಸಾಗರದಲ್ಲಿ ಸೌಹಾರ್ದತೆಯ ಅಲೆಗಳಾಗಿ ದಡ ಸೇರೋಣ ಎಂದು ಕರೆ ನೀಡಿದರು.
ಶಿವಗಂಗಾ ಕ್ಷೇತ್ರ ಶ್ರೀ ಮೇಲ್ಗಣ ಗವಿ ವೀರಸಿಂಹಾಸನ ಸಂಸ್ಥಾನ ಮಠ ಶ್ರೀ ಷ. ಬ್ರ. ಡಾ|| ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಜೀ, ಜ್ಞಾನಭೋದಿನಿ ವಿದ್ಯಾಸಂಸ್ಥೆ ಮುಖ್ಯ ಉಪನ್ಯಾಸಕ ಜಸಿನಥ್ ಪೆರೇರಿಯಾ, ಮೌಲ್ವಿ ಮೌಲಾನಾ ಅಬ್ದುಲ್ ಗಫಾರ್‌ಶೇಖ್, ದಿವ್ಯ ಉಪಸ್ಥಿತರಿದ್ದರು.
ಅತಿಥಿಗಳಾಗಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಶ್ರಾವಣ ಲಕ್ಷ್ಮಣ್, ಶ್ರೀ ಆಶ್ರಯ ಅನಾಥಾಶ್ರಮದ ಡಾ| ಶ್ರೀಮಠ ನಾಗರಾಜ ಸ್ವಾಮೀಜ, ಬಿಬಿಎಂಪಿ ಸದಸ್ಯ ಆನಂದ್ ಸಿ. ಸುರಕ್ಷಾ ಮಹೇಂದ್ರ ಮುನೋತ್, ಜೈನ್ ಶ್ವೇತಾಂಬರ ತೇರಾಪಂಥ ಸಭಾ ಅಧ್ಯಕ್ಷ ಪ್ರಕಾಶ್ ಚಂದ್ ಗಾಂಧಿ, ಕಾರ್ಯದರ್ಶಿ ಮಂಗಲ್ ಕೋಚರ್, ಸಂಚಾಲಕರಾದ ರಾಜೇಶ್ ಚಾವತ್, ಬಿ.ವಿ. ಚಂದ್ರಶೇಖರಯ್ಯ ಮತ್ತಿತರರು ಭಾಗವಹಿಸಿದ್ದರು.
