ಮಸ್ಕತ್ – ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ

ಮಸ್ಕತ್:
ಮಂಗಳೂರು–ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಕಳೆದ ಮೂರು ತಿಂಗಳಿಂದ ವಿಮಾನಯಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಮಾರ್ಗದಲ್ಲಿ ಮೊದಲು ವಾರಕ್ಕೆ ನಾಲ್ಕು ವಿಮಾನಗಳು ನಿಯಮಿತವಾಗಿ ಸಂಚಾರ ಮಾಡುತ್ತಿದ್ದವು. ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಅಚಾನಕ್ ಸ್ಥಗಿತಗೊಂಡಿದ್ದು, ಮಸ್ಕತ್‌ನಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ಸಂಕಷ್ಟ ಉಂಟುಮಾಡಿದೆ.

ಗಲ್ಫ್‌ನ ಬಹುತೇಕ ರಾಷ್ಟ್ರಗಳಿಗೆ ನೇರ ವಿಮಾನ ಸೇವೆ ಮುಂದುವರಿದಿರುವ ಸಂದರ್ಭದಲ್ಲಿ, ಇತ್ತೀಚೆಗೆ ಕುವೈತ್ ದೇಶಕ್ಕೂ ನೇರ ವಿಮಾನ ಸೇವೆ ಆರಂಭಗೊಂಡಿದೆ. ಆದರೆ ಮಸ್ಕತ್‌ನಿಂದ ಮಂಗಳೂರಿಗೆ ಪ್ರಯಾಣಿಸುವವರು ಈಗ ದೆಹಲಿ, ಮುಂಬೈ ಅಥವಾ ಕೇರಳದ ಕನ್ನೂರು ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದಿನವಿಡೀ ಪ್ರಯಾಣದ ಬಳಿಕ ಮಾತ್ರ ಮಂಗಳೂರು ತಲುಪಬೇಕಾಗಿರುವುದರಿಂದ ಅನೇಕರು ಕಷ್ಟದಲ್ಲಿದ್ದಾರೆ.

ವಾರಕ್ಕೆ ನಾಲ್ಕು ವಿಮಾನಗಳ ಬದಲು ಕನಿಷ್ಠ ಎರಡು ವಿಮಾನ ಸೇವೆ ಮರುಪ್ರಾರಂಭಿಸಬೇಕೆಂಬುದು ಓಮಾನ್‌ನಲ್ಲಿ ನೆಲೆಸಿರುವ ಕುಮುಟ, ಕುಂದಾಪುರ, ಉಡುಪಿ, ಚಿಕ್ಕಮಗಳೂರು, ಮಂಗಳೂರು ಹಾಗೂ ಕಾಸರಗೋಡು ಪ್ರದೇಶದ ಅನಿವಾಸಿಗಳ ಒತ್ತಾಯವಾಗಿದೆ. ಈ ಕುರಿತು ತಕ್ಷಣದ ಸ್ಪಂದನೆ ಅಗತ್ಯವಿದೆ ಎಂದು ಅವರು ಮನವಿ ಮಾಡಿದ್ದಾರೆ.

Muscat-Mangalore direct flight service suspended

ಸಂಸದರಿಗೆ ಮನವಿ ಪತ್ರ ಸಲ್ಲಿಕೆ

ಮಸ್ಕತ್ ಮತ್ತು ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು (NRI) ಈ ನೇರ ವಿಮಾನ ಸೇವೆಯನ್ನು ಮರುಪ್ರಾರಂಭಿಸಲು ಕಾಸರಗೋಡು ಸಂಸದ ಶ್ರೀ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಉಡುಪಿ–ಚಿಕ್ಕಮಗಳೂರು ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಓಮಾನ್‌ನ ಹಿರಿಯ ಸಮುದಾಯ ನಾಯಕ ಶ್ರೀ ಮಲ್ಲಾರ್ ಶಶಿಧರ ಶೆಟ್ಟಿಯವರು ಮಂಗಳೂರು ಸಂಸದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ವಿಷಯ ತಿಳಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸಮುದಾಯ ಸಂಘಟನೆಗಳ ಒಗ್ಗಟ್ಟಿನ ಮನವಿ

ಶಶಿಧರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಓಮಾನ್‌ನಲ್ಲಿರುವ ಕರಾವಳಿ ಕರ್ನಾಟಕದ ಹಲವು ಸಮುದಾಯ ಸಂಘಟನೆಗಳು ಮತ್ತು ಸಾಂಸ್ಕೃತಿಕ ವೇದಿಕೆಗಳು ಈ ವಿಷಯವನ್ನು ಸಂಸದರು ಮತ್ತು ಶಾಸಕರ ಗಮನಕ್ಕೆ ತರುವ ನಿಟ್ಟಿನಲ್ಲಿ ಮುಂದಾಗಿವೆ.

ಈ ಹಿನ್ನೆಲೆಯಲ್ಲಿ, ಗಡಿನಾಡ ಸಾಹಿತ್ಯ ಅಕಾಡೆಮಿ – ಓಮಾನ್, ಕೆಎಂಸಿಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಶ್ರೀ ಅಬುಬಕರ್ ರಾಯಲ್ ಬೂಲ್ಲಾರ್, ಕರ್ನಾಟಕ ಜಾನಪದ ಪರಿಷತ್ತು – ಓಮಾನ್ ಘಟಕ ಅಧ್ಯಕ್ಷ ಶ್ರೀ ಶಿವಾನಂದ ಕೋಟ್ಯಾನ್, ಮೂಗವೀರ ಮಸ್ಕತ್ ಅಧ್ಯಕ್ಷ ಶ್ರೀ ಪದ್ಮಕರ ಮೆಂಡನ್, ಮಸ್ಕತ್ ಹಿರಿಯರಾದ ಶ್ರೀ ಯುವರಾಜ್ ಮಸ್ಕತ್, ವಿಠಲ ಪೂಜಾರಿ, ಮತ್ತು ಮಸ್ಕತ್ ಕ್ರಿಕೆಟ್ ಹಿರಿಯ ಆಟಗಾರ ಶ್ರೀ ಶತೀಶ್ ಬಾರ್ಕರು ಸಹಿತ ಉಡುಪಿ ಸಮಾಜಿಕ ಮುಂದಾಳು ಉದಯ ಕುಮಾರ್ ಶೆಟ್ಟಿ ಮತ್ತು ಕಲಾವಿದ ರಾಜಾ ಕಟಪಾಡಿ ಮುಂತಾದವರು ಮನವಿಯನ್ನು ಸಲ್ಲಿಸಿದ್ದಾರೆ.

ಸರ್ಕಾರ ಮತ್ತು ವಿಮಾನಯಾನ ಇಲಾಖೆಯು ಈ ವಿಷಯಕ್ಕೆ ತಕ್ಷಣ ಸ್ಪಂದಿಸಿ, ಮಸ್ಕತ್–ಮಂಗಳೂರು ನೇರ ವಿಮಾನ ಸೇವೆ ಮರುಪ್ರಾರಂಭಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published.