ಪಡುಬಿದ್ರಿಯ ದೇವಳದ ಅಂಗಣಕ್ಕೆ ನುಗ್ಗಿದ ನೀರು

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿದು ಹೋಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಪಡುಬಿದ್ರಿಯ ಕೆಳಗಿನ ಪೇಟೆ ರಸ್ತೆ ಕೆರೆಯ ರೂಪತಾಳಿದೆ. ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ಗ್ರಾಮ ದೇಗುಲದ ಅಂಗಣದ ಒಳಗೂ ಕೆಸರು ನೀರು ನುಗ್ಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ಬಂಟರ ಭವನದ ಬಳಿ ತೀರ ಸಪೂರವಾದ ಪೈಪ್ ಹಾಕಿದ ಪರಿಣಾಮ ಹಾಗೂ ಪಕ್ಕದ ಖಾಸಗಿ ಕಟ್ಟಡದ ಬಳಿ ಮಳೆನೀರು ಹರಿದು ಹೋಗುವ ಚರಂಡಿಯನ್ನು ಮಣ್ಣು ತುಂಬಿಸಿ ಮುಚ್ಚಿದ್ದರಿಂದ ಸ್ಥಳೀಯ ಮನೆಗಳು ಕುಸಿಯುವ ಭೀತಿ ಇದ್ದು, ರಸ್ತೆಯೂ ಮುಳುಗಡೆಯಾಗಿ ವಾಹನ ಸವಾರರು ಬಹಳ ಪ್ರಾಯಾಸಪಟ್ಟು ಚಲಿಸುವಂತ್ತಾಗಿದೆ. ಅಲ್ಲದೆ ಕೆಸರು ನೀರು ನಮ್ಮ ಗ್ರಾಮ ದೇಗುಲದ ಅಂಗಣ ಪ್ರವೇಶಿಸಿದ್ದು, ಈ ಬಗ್ಗೆ ಕಳೆದ ವರ್ಷವೇ ಸ್ಥಳೀಯ ಗ್ರಾಮ ಪಂಚಾಯಿತಿ, ತಹಶಿಲ್ದಾರರು, ಜಿಲ್ಲಾಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಎಲ್ಲರೂ ನಮ್ಮ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯವೇ ತೋರಿದ್ದಾರೆ ಎಂಬುದಾಗಿ ಸ್ಥಳೀಯ ನಿವಾಸಿ ವೀರೇಂದ್ರ ಪೂಜಾರಿ ನಮ್ಮ ಸರ್ಕಾರಿ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.
