ಪಡುಬಿದ್ರಿ: ಜಟಿಲಗೊಂಡ ನಂದಿಕೂರು ರೈಲ್ವೆ ಬ್ರಿಡ್ಜ್ ಸಮಸ್ಯೆ -ಸಾರ್ವಜನಿಕರು ಆಕ್ರೋಶ

ಬಹಳಷ್ಟು ವರ್ಷಗಳಿಂದ ನಂದಿಕೂರು ರೈಲ್ವೆ ಬ್ರಿಡ್ಜ್ ರಸ್ತೆ ಹೊಂಡಮಯವಾಗಿ ಜನರ ಪ್ರಾಣ ಹಿಂಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪಡುಬಿದ್ರಿ-ಕಾರ್ಕಳ ರಾಜ್ಯ ರಸ್ತೆ ಇದ್ದಾಗಿದ್ದು, ದಿನವೊಂದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳು ಹಾಗೇನೆ ಪಾದಚಾರಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುವ ರಸ್ತೆ ಇದಾಗಿದೆ. ಬಸ್ ಚಾಲಕರಂತೂ ಯಾವುದೇ ಮೂಲಾಜಿ ಇಲ್ಲದೆ ಈ ಹೊಂಡಮಯ ರಸ್ತೆಯಲ್ಲಿ ಹೊಂಡ ತಪ್ಪಿಸುವ ನೆಪದಲ್ಲಿ ವಾಯುವೇಗದಲ್ಲಿ ಸಂಚರಿಸಿ ಪಾದಚಾರಿಗಳ ಮೈಮೇಲೆ ಏರಿ ಬರುತ್ತಿದ್ದು ಸ್ವಲ್ಪದರಲ್ಲೇ ಅಪಘಾತಗಳು ತಪ್ಪಿದ ಘಟನೆಗಳು ಒಂದೆರಡಲ್ಲ.

ಮಳೆ ಬಂದರಂತ್ತೂ ರಸ್ತೆಯ ಹೊಂಡಗಳು ನೀರಿನಿಂದ ಮುಚ್ಚಿ ಕಾಣದೆ ದ್ವಿಚಕ್ರ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಪಾದಚಾರಿಗಳ ಮೈಮೇಲೆ ಕೆಸರು ನೀರು ಎರಚಿ ಅವರ ಪ್ರಯಾಣ ಮೊಟುಕುಗೊಳ್ಳುತ್ತಿದೆ.

ಈ ಬಗ್ಗೆ ಮಾತನಾಡಿದ ಸ್ಥಳೀಯ ತಾ.ಪಂ. ಮಾಜಿ ಸದಸ್ಯ ಲಕ್ಷ್ಮಣ್ ಶೆಟ್ಟಿ, ನಂದಿಕೂರಿನ ಈ ರೈಲ್ವೆ ಬ್ರಿಡ್ಜ್ ರಸ್ತೆ ಸಮಸ್ಯೆ ಇಂದು ನಿನ್ನೆಯದಲ್ಲ, ಈ ಬಗ್ಗೆ ಸಂಬಂಧಿಸಿದ ಇಂಜಿನಿಯರ್ ಗಮನಕ್ಕೆ ತಂದರೆ ಒಂದಿಷ್ಟು ಜಲ್ಲಿ ಕಲ್ಲುಗಳನ್ನು ತಂದು ಹಾಕಿ ಹರಕೆ ತೀರಿಸುತ್ತಿದ್ದು ಬಿಟ್ಟರೆ, ಶಾಶ್ವತ ಪರಿಹಾರಕ್ಕೆ ಮನ ಮಾಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಉದ್ಭವಗೊಂಡ ಈ ಸಮಸ್ಯೆಯಿಂದ ಅಪಘಾತ ನಡೆದು ಜನ ಪ್ರಾಣ ಕಳೆದುಕೊಳ್ಳುವಂತಾಗಿದೆ. ಈ ಭಾಗದ ಜನಪ್ರತಿನಿಧಿಗಳು ಎಚ್ಚೆತ್ತು ಇಲ್ಲಿನ ಪ್ರಮುಖ ಸಮಸ್ಯೆಗೆ ಸ್ಪಂದಿಸಬೇಕಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published.