ಪುತ್ತೂರು : 21ನೇ ಕನ್ನಡ ಸಾಹಿತ್ಯ ಸಮ್ಮೇಳನ
ಪುತ್ತೂರು : ಕನ್ನಡ ಭಾಷೆ ನಿಜವಾದ ಅರ್ಥದಲ್ಲಿ ಉಳಿದಿದೆ, ಉಳಿಯುತ್ತಿದೆ, ಬೆಳೆಯುತ್ತಿದೆ ಎಂದಾದರೆ, ಅದು ಹಳ್ಳಿಗಳಲ್ಲಿ, ಹೋಬಳಿಗಳಲ್ಲಿ ಮತ್ತು ತಾಲೂಕುಗಳಲ್ಲಿ ಮಾತ್ರ. ಕನ್ನಡ ಸಾಹಿತ್ಯ ಪರಿಷತ್ಗೆ ಭದ್ರ ಅಡಿಪಾಯ ಹಾಕಿರುವುದು ಹಳ್ಳಿಗಳು, ಹೋಬಳಿಗಳು ಮತ್ತು ತಾಲೂಕುಗಳು. ಹಾಗಾಗಿ ನಾನು ತಾಲೂಕು ಮಟ್ಟ ಮಾತ್ರವಲ್ಲದೆ, ಹೋಬಳಿ, ಗ್ರಾಮ ಮಟ್ಟಕ್ಕೂ ಹೋಗುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ ಆಗಬೇಕೆನ್ನುವುದು ನಮ್ಮ ಉದ್ದೇಶ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಹೇಳಿದರು.
ಪುತ್ತೂರಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಆರಂಭಗೊಂಡ ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ಎಷ್ಟು ಭಾಷೆಗಳಿವೆ. ಎಷ್ಟು ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಎಷ್ಟು ಭಾಷೆಗಳು ಜನರ ಮತ್ತು ಸರ್ಕಾರದ ಪ್ರೇರಣೆಯಿಂದ ಉಳಿದುಕೊಂಡವೆ ಮತ್ತು ಬೆಳೆಯುತ್ತಿವೆ ಎಂಬ ಕುರಿತು ವರ್ಷಕ್ಕೊಮ್ಮೆ ಅಧ್ಯಯನ ನಡೆಯುತ್ತದೆ. ಅಮೇರಿಕಾದ ಯತ್ನಲಾಗ್ ಸಂಸ್ಥೆಯು ಜಗತ್ತಿನ ಪರಿಪೂರ್ಣ ಭಾಷೆಯಾವುದು ಎಂಬ ಕುರಿತು ಪ್ರಾಚೀನ ಭಾಷೆಯಾಗಿರಬೇಕು, ಸ್ವಂತ ಭಾಷೆ ಭಾಷೆಯಾಗಿರಬೇಕು. ಸ್ವಂತ ಲಿಪಿ ಇರಬೇಕು ಮೊದಲಾದ ಮಾನದಂಡಗಳೊಂದಿಗೆ ಅಧ್ಯಯನ ನಡೆಸಿ ಮೂರು ಭಾಷೆಗಳನ್ನು ಮಾತ್ರ ಪರಿಪೂರ್ಣ ಭಾಷೆ ಎಂದು ಆಯ್ಕೆ ಮಾಡಿದ್ದು,ಇದರಲ್ಲಿ ಇಂಗ್ಲೀಷ್, ಹಿಂದಿ ಭಾಷೆ ಸೇರಿಲ್ಲ. ಆದರೆ ಆಯ್ಕೆ ಮಾಡಿರುವ ಮೂರು ಭಾಷೆಗಳಲ್ಲಿ ಕನ್ನಡ ಭಾಷಯೂ ಒಂದು ಎಂದರು.
ಉದ್ಘಾಟನಾ ಸಮಾರಂಭಕ್ಕೆ ಮೊದಲು ಪುತ್ತೂರು ಮಹಾಲಿಂಗೇಶ್ವರ ದೇವಳದ ವಠಾರದಿಂದ ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ವೇದಿಕೆ ತನಕ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಿತು. ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು ಮೆರವಣಿಗೆ ಉದ್ಘಾಟಿಸಿದರು. ನಗರಸಭೆಯ ಸದಸ್ಯೆ ಜಗನ್ನಿವಾಸ್ ರಾವ್ ಪಿ.ಜಿ.ಅವರು ಭುವನೇಶ್ವರಿಗೆ ಪುಷ್ಪಾರ್ಜನೆ ಮಾಡಿದರು.
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಡಾ.ಎಚ್.ಜಿ.ಶ್ರೀಧರ್, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಾಳ್ತಾಜೆ ವಸಂತಕುಮಾರ್, ನಗರಸಭೆಯ ಉಪಾಧ್ಯಕ್ಷೆ ವಿದ್ಯಾ.ಆರ್.ಗೌರಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವಾಧ್ಯಕ್ಷ ಎಸ್.ಜಿ.ಕೃಷ್ಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಹಶೀಲ್ದಾರ್ ನಿಸರ್ಗಪ್ರಿಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಉಪನ್ಯಾಸಕ ಡಾ.ಮನಮೋಹನ್ ಮತ್ತಿತರರು ಉಪಸ್ಥಿತರಿದ್ದರು.