ಪುತ್ತೂರು: ಉತ್ಕೃಷ್ಟ ಸಂಸ್ಕೃತಿಯ ಪ್ರತೀಕ ತುಳು ಭಾಷೆ: ವಾಮನ ಪೈ
ಪುತ್ತೂರು: ಭಾಷೆ ಮಾತ್ರವಾಗಿರದೆ ಉತ್ಕೃಷ್ಟ ಸಂಸ್ಕೃತಿಯ ಪ್ರತೀಕವಾಗಿರುವ ತುಳುವಿಗೆ ಅಪಾರ ಶಕ್ತಿಯಿದೆ. ಪ್ರಪಂಚದಲ್ಲೇ ಅತ್ಯಂತ ಹಳೆಯ ಭಾಷೆಯಾಗಿರುವ ತುಳುವಿಗೆ ಹಾಗೂ ತುಳು ಭಾಷಿಗರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆಯೊಂದಿಗೆ ವಿಶೇಷ ಗೌರವವಿದೆ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಹೇಳಿದರು.
ತುಳುಕೂಟೊ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ತುಳುವೆರೆ ಮೇಳೊ-2024ಹಾಗೂ ತೆನೆಸ್ ಮೇಳದಲ್ಲಿ ವ್ಯಾಪಾರ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ತೆನಸ್ ಮೇಳಕ್ಕೆ ಚಾಲನೆ ನೀಡಿದ ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಕರಾವಳಿ ಭಾಗದಲ್ಲಿ ಹೆಚ್ಚಿನವರ ಮಾತೃ ಭಾಷೆ ತುಳು ಆಗಿದೆ. ಆದರೆ ಪ್ರದೇಶಕ್ಕೆ ಸಂಬಂಧಿಸಿ ಆ ಭಾಷೆಯನ್ನಾಡುವಲ್ಲಿ ವ್ಯತ್ಯಾಸವಿದೆ. ತುಳುವಿಗೆ ವಿಶೇಷ ಮಾನ್ಯತೆಯ ಕುರಿತಂತೆ ಈಗಾಗಲೇ ಗಂಭೀರ ಪ್ರಯತ್ನಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿಸರಕಾರಕ್ಕೆ ನಮ್ಮದೂ ಆಗ್ರಹವಿದೆ ಎಂದರು.
ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈ,ತುಳುವೆರೆ ಮೇಳೊ ಸಮಿತಿ ಕಾರ್ಯಾಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯಾನ್ ಮಸ್ಕರೇನಸ್,ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ,ಜನ್ಮ ಫೌಂಡೇಶನ್‌ನ ಡಾ. ಹರ್ಷಕುಮಾರ್ ರೈ ಮಾಡಾವು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.