ಪುತ್ತೂರು : ಕಟ್ಟಡ ಕಾಮಗಾರಿ ಮುಗಿದರೂ ಕಾಲೇಜು ಪ್ರಾರಂಭ ಕನಸು ಇನ್ನೂ ದೂರ

ಪುತ್ತೂರು ತಾಲೂಕಿನ ಕೊಯಿಲದಲ್ಲಿ ನಿರ್ಮಾಣವಾದ ಪಶು ವೈದ್ಯಕೀಯ ಕಾಲೇಜಿಗೆ 2012-13ನೇ ಸಾಲಿನಲ್ಲಿ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಬಜೆಟ್ ನಲ್ಲಿ ಪಶು ವೈದ್ಯಕೀಯ ಕಾಲೇಜು ಘೋಷಿಸಿ 145 ಕೋಟಿ ರೂ. ಮೀಸಲಿಟ್ಟಿದ್ದರು. ಬಳಿಕ ಸದಾನಂದ ಗೌಡ ಕನಸಿನ ಕೂಸಿಗೆ 2016 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಶಿಲಾನ್ಯಾಸ ನೆರವೇರಿಸಿದ್ದರು. ಆದ್ರೆ ಅಂದಿನಿಂದ ಇಂದಿನ ತನಕವೂ ಕಾಮಗಾರಿ ಕುಂಟುತ್ತಾ ಸಾಗಿ ಒಂದು ಹಂತಕ್ಕೆ ಬಂದು ನಿಂತಿದೆ. ಮೂಲಭೂತ ವ್ಯವಸ್ಥೆಗೆ ಸಂಬಂಧಪಟ್ಟ ಕೆಲವು ಕೆಲಸ ಕಾರ್ಯಗಳು ಇನ್ನೂ ಬಾಕಿ ಇದೆ.

ಸುಮಾರು 300 ಕೋಟಿಯ ಈ ಯೋಜನೆ ಮೂರು ಹಂತದ ಕಾಮಗಾರಿ ಮೂಲಕ ಸಿದ್ಧಗೊಂಡಿದೆ. ಈ ಹಣದಲ್ಲಿ ಐದು ಬೃಹತ್ ಕಟ್ಟಡದ ಕ್ಯಾಂಪಸ್ ನಿರ್ಮಾಣವಾಗಿದೆ. ಯೋಜನೆಯ ಪ್ರಕಾರ 2021-22 ನೇ ಸಾಲಿನಲ್ಲಿ ಮೊದಲ ಪಶು ವೈದ್ಯಕೀಯ ಕೋರ್ಸ್ ಆರಂಭವಾಗಬೇಕಿತ್ತು. ಆದ್ರೆ ಇದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.ರೈತರ ಮಕ್ಕಳನ್ನೇ ಕೇಂದ್ರೀಕರಿಸಿ ನಿರ್ಮಿಸಲಾಗಿರುವ ಈ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಜಾತಕಪಕ್ಷಿಗಳಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.

ಇನ್ನು ಪಶು ವೈದ್ಯಕೀಯ ಕಾಲೇಜು, ಪಶು ವೈದ್ಯಕೀಯ ಆಸ್ಪತ್ರೆ, ಅತಿಥಿ ಗೃಹ, ಪುರುಷ ಮತ್ತು ಮಹಿಳಾ ಹಾಸ್ಟೆಲ್, ಗೆಸ್ಟ್ ಹೌಸ್ ಗಳನ್ನೊಳಗೊಂಡ ಈ ಬೃಹತ್ ಕ್ಯಾಂಪಸ್‍ನ್ನ ಸ್ಟಾರ್ ಇನ್ಫ್ರಾಟೆಕ್ ಎಂಬ ಸಂಸ್ಥೆ ಕಾಮಗಾರಿ ಮುಗಿಸಿದೆ. ಆದ್ರೆ ಮೂಲಭೂತ ವ್ಯವಸ್ಥೆಗಳಾದ ನೀರು ಸರಬರಾಜು, ರಸ್ತೆಯ ಟೆಂಡರ್ ಕಾರ್ಯ ಮುಗಿದಿಲ್ಲ. ಇದರ ಜೊತೆಗೆ ಸಿಬ್ಬಂದಿಗಳ ನೇಮಕಾತಿ, ಪೀಠೋಪಕರಣಗಳ ಖರೀದಿ, ಗಣಕಯಂತ್ರಗಳ ಜೋಡಣೆಯಂತಹ ಕಾರ್ಯಗಳ ನಡೆಯಬೇಕಿದೆ. ಇದು ಏನಿಲ್ಲ ಎಂದರೂ ಒಂದು ವರ್ಷದ ಯೋಜನೆ. ಆದ್ರೆ ಇಷ್ಟೆಲ್ಲ ಕಾಮಗಾರಿ ಮುಗಿದಿದ್ದರೂ ಕಾಲೇಜು ಪ್ರಾರಂಭವಾಗುವ ಕನಸು ಮಾತ್ರ ಇನ್ನೂ ದೂರವಿದೆ. ಹಾಗಾಗಿ ಹೇಗಿದ್ರು 2016 ನೇ ಇಸವಿಯಲ್ಲಿ ಅಂದು ಶಿಲಾನ್ಯಾಸ ನೆರವೇರಿಸಿದ್ದ ಸಿದ್ದರಾಮಯ್ಯ ಅವರು ಈ ಭಾರೀ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದುಕೊಂಡಿದ್ದಾರೆ. ಈಗಲಾದ್ರೂ ಈ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಮುನ್ನುಡಿ ಬರೆಯುವಂತಾಗಲಿ. ಈ ಮೂಲಕ ಇಲ್ಲಿನ ಸ್ಥಳೀಯರಿಗೆ ಉದ್ಯೋಗ ದೊರೆಯುವಂತಾಗಲಿ ಎಂಬುದು ಆ ಗ್ರಾಮದ ಜನತೆಯ ಮಾತು…

ಇನ್ನು ಭೂತ ಬಂಗಲೆಯಂತಾದ ಈ ಕಟ್ಟಡಲ್ಲಿ ಜನ ಸಂಚಾರವಿಲ್ಲದ ಕಾರಣ ಪ್ರಾಣಿಗಳ ಆಶ್ರಯ ತಾಣವಾಗಿದೆ. ಪಶು ಸಂಗೋಪನಾ ಕೇಂದ್ರದ ಜಾಗದಲ್ಲಿ ಹಲವು ಕಟ್ಟಡಗಳನ್ನ ನಿರ್ಮಿಸಲಾಗಿತ್ತು. ಆದ್ರೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ. ಅಂತಹದ್ದೇ ರೀತಿಯಲ್ಲಿ ಮತ್ತೆ ಕೋಟ್ಯಾಂತರ ಖರ್ಚು ಮಾಡಿದ ಈ ಪಶು ವೈದ್ಯಕೀಯ ಕಾಲೇಜಿನ ಅವಸ್ಥೆಯೂ ಆಗಬಾರದು. ಹಾಗಾಗಿ ಈ ಭಾರೀಯಾದ್ರೂ ಪಶು ವೈದ್ಯಕೀಯ ಕಾಲೇಜು ಆರಂಭಗೊಳ್ಳಬೇಕು. ಈ ಮೂಲಕ ಕಾಲೇಜು ಆರಂಭಿಸುವಂತೆ ಸರ್ಕಾರಕ್ಕೆ ಸ್ಥಳೀಯರ ಒತ್ತಡ ಹಾಕಿದ್ದಾರೆ. ತಪ್ಪಿದ್ದಲ್ಲಿ ಪ್ರತಿಭಟನೆಗೆ ರೂಪುರೇಷ ಸಿದ್ಧಗೊಂಡಿದೆ.

Related Posts

Leave a Reply

Your email address will not be published.