ಫ್ಲ್ಯಾಟ್ ಮಾರಾಟ ಮಾಡುವುದಾಗಿ ಕೋಟ್ಯಂತರ ರೂಪಾಯಿ ವಂಚನೆ : ತಲೆಮರೆಸಿಕೊಂಡ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ
ಉಡುಪಿ: ಫ್ಲ್ಯಾಟ್ ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಬಳಿಕ ಹಲವರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಉಡುಪಿಯಲ್ಲಿ ನಡೆದಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಫ್ಲ್ಯಾಟ್ ಗಾಗಿ ಹಣ ನೀಡಿದವರು ಕಣ್ಣೀರು ಹಾಕುತ್ತಿದ್ದಾರೆ.
ಉಡುಪಿ ನಗರದ ಶ್ರೀ ಲಕ್ಷ್ಮೀ ಇನ್ಪ್ರಾಸ್ಟ್ರಕ್ಚರ್‌ನ ಮಾಲಕ, ಆರೋಪಿ ಅಮೃತ್ ಶೆಣೈ “ವೈಜರ್ ” ಹೆಸರಿನ ಅಪಾರ್ಟ್ಮೆಂಟ್ ಕಟ್ಟಿಸುತ್ತಿದ್ದಾನೆ. ಈ ಕಟ್ಟಡದ ನಿರ್ಮಾಣ ಹಂತದಲ್ಲೇ ಹಲವರು ಲಕ್ಷಾಂತರ ರೂಪಾಯಿ ನೀಡಿ ಬುಕ್ ಮಾಡಿದ್ದರು. ಅಂದಾಜು 40 ಕ್ಕೂ ಹೆಚ್ಚು ಜನರಿಂದ ಆರೋಪಿ ಕಂತುಗಳಲ್ಲಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾರೆ. ಆದರೆ ಫ್ಲ್ಯಾಟ್ ಕಾಮಗಾರಿಯನ್ನೂ ಮುಗಿಸದೆ, ನೋಂದಾವಣಿಯನ್ನೂ ಮಾಡದೆ ವಂಚಿಸಿರುವುದಾಗಿ ಫ್ಲ್ಯಾಟ್ ಮಾಲಕರು ದೂರಿದ್ದಾರೆ. ಅಲ್ಲದೆ, ಇಬ್ಬಿಬ್ಬರಿಗೆ ಒಂದೇ ಫ್ಲ್ಯಾಟ್ ನ್ನು ಮಾರಿದ್ದಾಗಿ ವಂಚನೆಗೊಳಗಾದವರು ದೂರಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ದೂರನ್ನೂ ನೀಡಲಾಗಿದೆ. ಸಂತ್ರಸ್ಥರು ಆರೋಪಿಗೆ ಹಿಡಿಶಾಪ ಹಾಕುತ್ತಾ ನ್ಯಾಯಕ್ಕಾಗಿ ಕಂಡಕಂಡವರಲ್ಲಿ ಗೋಗರೆಯುತ್ತಿದ್ದಾರೆ.