ಪುತ್ತೂರು : ಬೆಂಕಿ, ಹರಿತವಾದ ಆಯುಧ ಬಳಸಿ ತಾಲೀಮು ಪ್ರದರ್ಶನ

ಪುತ್ತೂರು : ಆಧುನಿಕ ಫಿಟ್ನೆಸ್ ಸೆಂಟರ್‍ಗಳ ಭರಾಟೆಯ ನಡುವೆಯೂ, ಪ್ರಾಚೀನ, ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವ್ಯಾಯಾಮಗಳಿಗೆ, ದೇಹದಾಢ್ರ್ಯ ಪ್ರದರ್ಶನದ ಜೊತೆಗೆ ವ್ಯಾಯಾಮ ಶಾಲೆಗಳು ಆಕರ್ಷಕ ಹಾಗು ಸಾಹಸಮಯ ಪ್ರದರ್ಶನಕ್ಕೂ ಹೆಸರುವಾಸಿಯಾಗಿವೆ. ಪುತ್ತೂರಿನ ಉದಯ ಕುಮಾರ್ ಈಗಲೂ ತಾಲೀಮು ತರಬೇತಿಯನ್ನು ನೀಡುತ್ತಿದ್ದಾರೆ.

ತಾಲೀಮಿನಲ್ಲಿ ಸುಮಾರು 42 ಪ್ರಕಾರದ ತಾಲೀಮು ಪ್ರದರ್ಶನಗಳಿದ್ದು, ಸಿಂಗಲ್ ಬಾಣ, ಡಬಲ್ ಬಾಣ, ಬಣ್ಣೋಟ್ಟಿಗಳನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸೋದು. ಈ ಬಣ್ಣೋಟ್ಟಿಗಳ ತುದಿಗೆ ಸೀಮೆ ಎಣ್ಣೆಯಿಂದ ಅದ್ದಿದ ಬಟ್ಟೆಯನ್ನು ಕಟ್ಟಿ ಅದಕ್ಕೆ ಬೆಂಕಿ ಹಚ್ಚಿ ಎಲ್ಲಾ ದಿಕ್ಕುಗಳಿಗೆ ಎಂಟು ಬಾರಿ ತಿರುಗಿ, ಮೈ ಕೈಗಳಿಗೆ ಕೊಂಚವೂ ಕೂಡಾ ಬೆಂಕಿಯ ಕೆನ್ನಾಲಿಗೆ ತಾಕದಂತೆ ಬೀಸುವ ಸಾಹಸ ತಾಲೀಮಿನಲ್ಲಿ ಎಲ್ಲರ ಮನಸೆಳೆಯುವ ಒಂದು ಪ್ರಕಾರದ ಪ್ರದರ್ಶನವಾಗಿದೆ.

ಅದೇ ರೀತಿಯಲ್ಲಿ ಎಲ್ಲರ ಕಣ್ಣು ಉಬ್ಬೇರಿಸುವಂತೆ ಮಾಡುವ ಹರಿತವಾದ ಕತ್ತಿಯಿಂದ ವ್ಯಕ್ತಿಯೋರ್ವನ ತಲೆ, ಹೊಟ್ಟೆ, ಕೈ-ಕಾಲುಗಳ ಮೇಲೆ ಇಟ್ಟಂತಹ ಸೌತೆಕಾಯಿಗಳನ್ನು ವ್ಯಕ್ತಿಗೆ ದೇಹಕ್ಕೆ ಯಾವುದೇ ರೀತಿಯ ಹಾನಿ ಮಾಡದಂತೆ ಸೌತೆಕಾಯಿಯನ್ನು ಎರಡು ತುಂಡಾಗಿ ಕತ್ತರಿಸುವ ಪ್ರದರ್ಶನ. ತೆಂಗಿನಕಾಯಿಯನ್ನು ತಲೆ ಮತ್ತು ಕೈಗಳಿಂದ ಒಡೆಯುವ ಸಾಹಸ ಹೀಗೆ ತಾಲೀಮಿನಲ್ಲಿ ಇರುವಂತಹ ಎಲ್ಲಾ ಪ್ರಕಾರಗಳೂ ನೋಡುವವರ ಮನಸೆಳೆಯುತ್ತದೆ.

ಇಂಥಹ ತಾಲೀಮು ಪ್ರದರ್ಶನವನ್ನು ಕಳೆದ ನೂರು ವರ್ಷಕ್ಕೂ ಮಿಕ್ಕಿದ ಸಮಯದಿಂದ ನೀಡುತ್ತಿರುವ ವ್ಯಾಯಾಮ ಶಾಲೆಗಳಲ್ಲಿ ಮಂಗಳೂರಿನ ಪೊಲೀಸ್ ಲೈನ್ ನಲ್ಲಿರುವ ಮುನೀಶ್ವರ ಮಹಾಗಣಪತಿ ವ್ಯಾಯಾಮ ಶಾಲೆಯೂ ಒಂದಾಗಿದೆ. ಸರಿಯಾದ ತರಬೇತಿಯಿಲ್ಲದೆ ತಾಲೀಮು ಪ್ರದರ್ಶನದಲ್ಲಿ ಒಂದು ಸಾಮಾನ್ಯ ಪ್ರದರ್ಶನವನ್ನೂ ನೀಡಲು ಸಾಧ್ಯವಿಲ್ಲ ಎನ್ನುವ ಮುನೀಶ್ವರ ಮಹಾಗಣಪತಿ ವ್ಯಾಯಾಮ ಶಾಲೆಯ ಹಿರಿಯ ಸದಸ್ಯರಾದ ಪುತ್ತೂರಿನ ಉದಯಕುಮಾರ್ ಹೇಳುವಂತೆ ದಿನಕ್ಕೆ ಒಂದರಿಂದ ಎರಡು ಗಂಟೆಗಳ ತರಬೇತಿ ಅಗತ್ಯವಿದೆ.

ನಾಲ್ಕನೇ ತರಗತಿಯಲ್ಲಿರುವಾಗ ತಾಲೀಮು ಪ್ರದರ್ಶನ ತಂಡಕ್ಕೆ ಸೇರಿದ್ದು, ಸುಮಾರು 52 ವರ್ಷಗಳಿಂದ ತಾಲೀಮು ಪ್ರದರ್ಶನ ನೀಡಿಕೊಂಡು ಬರುತ್ತಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳು ಇರುವ ಕಡೆಗಳಲ್ಲಿ ಹೆಚ್ಚಾಗಿ ತಾಲೀಮು ತಂಡಗಳನ್ನು ಪ್ರದರ್ಶನ ನೀಡಲು ಆಹ್ವಾನಿಸುತ್ತಿದ್ದು, ಒಂದು ತಂಡದಲ್ಲಿ ಕನಿಷ್ಠ ಇಪ್ಪತ್ತೈದಕ್ಕಿಂತ ಮಿಕ್ಕಿ ಜನರಿರುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಸಾಹಸಮಯ ಪ್ರದರ್ಶನಗಳನ್ನು ತಾಲೀಮು ಪ್ರದರ್ಶನಕಾರರು ನೀಡುತ್ತಾರೆ. ಆದರೂ ತಾಲೀಮು ಪ್ರದರ್ಶನವನ್ನು ದೇಹದಲ್ಲಿ ಶಕ್ತಿ ಇರುವ ತನಕ ಮುಂದುವರಿಸಿಕೊಂಡು ಹೋಗಬೇಕೆಂಬ ಇಚ್ಛೆ ಇದೆ ಎನ್ನುತ್ತಾರೆ 61 ವರ್ಷ ಪ್ರಾಯದ ಉದಯಕುಮಾರ್.

ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿರುವ ನಡುವೆ ತಾಲೀಮು ತಂಡಗಳೂ ಇಂದು ಬೆರಳೆಣಿಕೆಯ ಸಂಖ್ಯೆಗೆ ಬಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯತೆ ಇಂದಿನ ಯುವ ಜನಾಂಗ ಮಾಡಬೇಕಿದೆ.

Related Posts

Leave a Reply

Your email address will not be published.