ಭಾರತದ ಡಬಲ್ಸ್ ಟೆನ್ನಿಸಿಗರು

ಆಸ್ಟ್ರೇಲಿಯಾ ಓಪನ್ ಟೆನ್ನಿಸ್‍ನಲ್ಲಿ 43ರ ಪ್ರಾಯದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೆ ಪುರುಷರ ಡಬಲ್ಸ್ ಗೆದ್ದು ರೋಹನ್ ಬೋಪಣ್ಣ ಸಾಧನೆ ಮಾಡಿದರು. ಅತಿ ಹಿರಿಯ ಗ್ರಾನ್‍ಸ್ಲಾಮ್ ವಿನ್ನರ್, ಅತಿ ಹಿರಿಯ ಟೆನ್ನಿಸ್ ಡಬಲ್ಸ್ ಒನ್ ಇತ್ಯಾದಿ ಸಾಧನೆ ಕರ್ನಾಟಕದ ಕೊಡವ ರೋಹನ್ ಬೋಪಣ್ಣ ಅವರದಾಯಿತು. ಭಾರತದ ಜಾಗತಿಕ ಗ್ರಾನ್‍ಸ್ಲಾಮ್ ಸಾಧಕರಾದ ಸಾನಿಯಾ ಮಿರ್ಜಾ, ಲಿಯಾಂಡರ್ ಪಯಸ್, ಮಹೇಶ್ ಭೂಪತಿ ಮೊದಲಾದವರ ಸಾಲಿಗೆ ಬೋಪಣ್ಣ ಸೇರಿದರು. ಅವರ ಸಾಧನೆ ಹಿರಿಯ ಎಂಬ ಹೊತ್ತಿನಲ್ಲಿ ಬಂದಿರುವುದು ವಿಶೇಷ.

ಜಾಗತಿಕವಾಗಿ ಭಾರತದ ರಾಮನಾಥನ್ ಕೃಷ್ಣನ್, ಅವರ ಮಗ ರಮೇಶ್ ಕೃಷ್ಣನ್, ವಿಜಯ ಅಮೃತರಾಜ್, ಆನಂದ ಅಮೃತರಾಜ್, ಸೋಮದೇವ ದೇವವರ್ಮನ್ ಮೊದಲಾದವರು ಟೆನ್ನಿಸ್‍ನಲ್ಲಿ ಮಿಂಚಿದ್ದಾರೆ. ಆದರೆ ಎದ್ದು ತೋರುವ ಹೆಸರು ಸಾನಿಯಾ, ಲಿಯಾಂಡರ್, ಭೂಪತಿ ಅವರದ್ದು. ಆ ಪಟ್ಟಿಗೆ ಈಗ ಸೇರ್ಪಡೆ ಕೊಡಗಿನ ಬೋಪಣ್ಣ. ಆಸ್ಟ್ರೇಲಿಯಾದಲ್ಲಿ ಅವರು ಗೆದ್ದುದು ಮೊದಲ ಪುರುಷರ ಡಬಲ್ಸ್. ಅದು ಅವರ ಎರಡನೆಯ ಗ್ರಾನ್‍ಸ್ಲಾಮ್ ಡಬಲ್ಸ್. 2022ರಲ್ಲಿ ಅವರು ಫ್ರೆಂಚ್ ಓಪನ್ ಟೆನ್ನಿಸ್‍ನಲ್ಲಿ ಕೆನಡಾದ ಗ್ಯಾಬ್ರಿಯೋಲಾ ದಬೋಸ್ಕಿ ಜೊತೆಗೆ ಮಿಕ್ಸೆಡ್ ಡಬಲ್ಸ್ ಗ್ರಾನ್‍ಸ್ಲಾಮ್ ಗೆದ್ದಿದ್ದರು. ಕ್ರಿಕೆಟ್ ಭ್ರಮೆಯಲ್ಲಿ ತೇಲುವ ಭಾರತೀಯರು ಇತರ ಕ್ರೀಡೆಗಳಲ್ಲಿ ಮಿಂಚಿದ್ದು ಕಡಿಮೆ. ಈಗೀಗ ಕಣ್ಣು ಬಿಡುತ್ತಿದ್ದಾರೆ. ಫುಟ್ಬಾಲ್, ಟೆನ್ನಿಸ್, ಬಾಕ್ಸಿಂಗ್, ಅತ್ಲೆಟಿಕ್ಸ್ ಮೊದಲಾದ ಕ್ರೀಡೆಗಳು ಜಾಗತಿಕವಾಗಿ ಹಣದ ಹೊಳೆ ಹರಿಸುವ, ಮಿಂಚಿನ ವೇಗ ಬಯಸುವ, ದೈಹಿಕ ಬಲ ಮತ್ತು ಛಲ ಬಯಸುವ ಆಟಗಳಾಗಿವೆ. ಕ್ರಿಕೆಟನ್ನು ಬಿಸಿಲು ಮೀಯುವ ಆಟ ಎನ್ನುವುದೂ ಇದೆ.

ಟೆನ್ನಿಸ್‍ನಲ್ಲಿ ವರುಷವಿಡೀ ನಾನಾ ಪಂದ್ಯಾವಳಿಗಳು ಇರುತ್ತವಾದರೂ ನಾಲ್ಕು ಮಾತ್ರ ಗ್ರಾನ್‍ಸ್ಲಾಮ್ ಇಲ್ಲವೇ ಗ್ರಾಂಡ್ ಸ್ಲಾಮ್‍ಗಳು ಎನಿಸಿವೆ. ಅವು ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್. ಒಲಿಂಪಿಕ್ಸ್ ಕ್ರೀಡಾ ಪದಕಕ್ಕೆ ಜಾಗತಿಕ ಮಹತ್ವ ಇರುವಂತೆ ಈ ನಾಲ್ಕು ಗ್ರಾನ್‍ಸ್ಲಾಮ್ ಗೆಲುವು ಟೆನ್ನಿಸಿಗರ ಕನಸು ಆಗಿರುತ್ತದೆ. ಇಲ್ಲಿ ಆಡಿದರೆ ಭರ್ಜರಿ ಆತಿಥ್ಯದ ಜೊತೆಗೆ ಪ್ರತಿ ಹಂತದ ಗೆಲುವಿಗೂ ಹಣ ದೊರೆಯುತ್ತದೆ. ವಿಂಬಲ್ಡನ್ ವಿಶೇಷ, ಅದರಂತೆಯೇ ಬಾರೀ ಹಣ ಹರಿಸುವ ಯುಎಸ್ ಓಪನ್ ಟೆನ್ನಿಸ್ ಲೋಕ ಪ್ರಸಿದ್ಧ. ಫ್ರೆಂಚ್ ಓಪನ್ ಆವೆ ಮಣ್ಣಿನ ಅಂಕಣದ ವಿಶೇಷದ್ದು. ಟೆನ್ನಿಸ್ ದಿಗ್ಗಜರಲ್ಲಿ ಒಬ್ಬರಾದ ರಾಫೆಲ್ ನಡಾಲ್ ಆವೆ ಮಣ್ಣಿನ ಅಂಕಣದ ರಾಜ ಎಂದೇ ಖ್ಯಾತರು. ವರುಷದ ಮೊದಲ ಗ್ರಾನ್‍ಸ್ಲಾಮ್ ಆಸ್ಟ್ರೇಲಿಯಾ ಓಪನ್‍ನಲ್ಲಿ ಸಿಂಗಲ್ಸ್ ಗೆದ್ದವರಿಗೆ 19 ಕೋಟಿ ರೂಪಾಯಿ, ರನ್ನರ್ ಅಪ್ ಆದವರಿಗೆ 9.4 ಕೋಟಿ ರೂಪಾಯಿ, ಡಬಲ್ಸ್ ಗೆದ್ದವರಿಗೆ ತಲಾ 4 ಕೋಟಿ ರೂಪಾಯಿ, ಡಬಲ್ಸ್ ರನ್ನರ್ ಅಪ್ ಆದವರಿಗೆ ತಲಾ 2 ಕೋಟಿ ರೂಪಾಯಿ ನಗದು ಬಹುಮಾನ ಇದೆ. ಇತರ ಪ್ರಾಯೋಜಕ ಇತ್ಯಾದಿ ಸಹ ಸಿಗುತ್ತದೆ.

ಜಾಗತಿಕ ಟೆನ್ನಿಸ್‍ನಲ್ಲಿ ಭಾರತೀಯರಲ್ಲಿ ಯಾರೂ ಏರದ ಎತ್ತರ ಏರಿದವರು ಲಿಯಾಂಡರ್ ಪಯಸ್. ಇವರು ಒಲಿಂಪಿಕ್ಸ್ ಪದಕ ಗೆದ್ದ ಏಕೈಕ ಟೆನ್ನಿಸಿಗ. ವಿಶೇಷ ಎಂದರೆ ಇವರ ತಂದೆ ವೇಸ್ ಪಯಸ್ ಕೂಡ ಹಾಕಿ ತಂಡ ಒಲಿಂಪಿಕ್ಸ್ ಪದಕ ಗೆದ್ದವರು. ಗೋವಾ ವೇಸ್ ಅವರ ಮೂಲ. ಡೇವಿಸ್ ಕಪ್ ಟೆನ್ನಿಸ್‍ನಲ್ಲಿ 45 ಸಿಂಗಲ್ಸ್ ಗೆಲುವು, 93 ಡಬಲ್ಸ್ ಗೆಲುವು ಲಿಯಾಂಡರ್ ಅವರ ವಿಶ್ವ ದಾಖಲೆ ಆಗಿದೆ. ಏಶಿಯನ್ ಗೇಮ್ಸ್‍ನ ಟೆನ್ನಿಸ್‍ನಲ್ಲಿ ಲಿಯಾಂಡರ್ ಪಯಸ್ 5 ಚಿನ್ನ, 3 ಬೆಳ್ಳಿ ಗೆದ್ದಿರುವ ಏಕೈಕ ಆಟಗಾರ ಆಗಿದ್ದಾರೆ. ವಿಂಬಲ್ಡನ್ ಜೂನಿಯರ್ ಸಿಂಗಲ್ಸ್ ಚಾಂಪಿಯನ್ ಆಗಿದ್ದ ಅವರು ಜಾಗತಿಕ ಸಿಂಗಲ್ಸ್‍ನಲ್ಲಿ ಭಾರತೀಯರು ಇತರರೆಲ್ಲರಿಗಿಂತ ಹೆಚ್ಚು ಎತ್ತರ ಏರಿದ್ದರು. ಆದರೆ ಅವರನ್ನು ಡಬಲ್ಸ್ ವೀರ ಎಂದೇ ಕರೆಯುವುದು. 8 ಪುರುಷರ ಮತ್ತು 10 ಮಿಶ್ರ ಎಂದು 18 ಡಬಲ್ಸ್ ಗ್ರಾನ್‍ಸ್ಲಾಮ್ ಗೆದ್ದಿದ್ದಾರೆ. 34 ಸರ್ತಿ ಗ್ರಾನ್‍ಸ್ಲಾಮ್ ಡಬಲ್ಸ್ ಫೈನಲ್ ಏರಿರುವುದು ಸಹ ಲಿಯಾಂಡರ್ ಸಾಧನೆ ಆಗಿದೆ. 1999ರಲ್ಲಿ ಕೆರಿಯರ್ ಗ್ರಾನ್‍ಸ್ಲಾಮ್ ಎಂದರೆ ವರುಷದ ನಾಲ್ಕೂ ಗ್ರಾನ್‍ಸ್ಲಾಮ್ ಡಬಲ್ಸ್ ಗೆದ್ದ ಮತ್ತು ಆ ವರುಷ ವಿಂಬಲ್ಡನ್‍ನಲ್ಲಿ ಪುರುಷರ ಮತ್ತು ಮಿಕ್ಸೆಡ್ ಡಬಲ್ಸ್ ಎರಡೂ ಗೆದ್ದ ಸಾಧನೆ ಲಿಯಾಂಡರ್ ಅವರದು. ಭಾರತದಲ್ಲಿ ದೀರ್ಘ ಕಾಲ ನಂಬರ್ ಒನ್ ಆಗಿದ್ದ ಅವರು ವಿಶ್ವ ಡಬಲ್ಸ್ ನಂಬರ್ ಒನ್ ಹಾಗೂ ಸಿಂಗಲ್ಸ್‍ನಲ್ಲಿ ಅತಿ ಏರು ಸ್ಥಾನ ಪಡೆದಿದ್ದ ಭಾರತೀಯರು. ಮೇಜರ್ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿ ಇತ್ಯಾದಿ ಪುರಸ್ಕೃತರು.

ಸಾನಿಯಾ ಮಿರ್ಜಾ ಜಾಗತಿಕ ಹೆಸರು ಮಾಡಿದ ಭಾರತದ ಏಕೈಕ ಟೆನ್ನಿಸ್ ಮಹಿಳಾ ತಾರೆ. ಹಾಗಾಗಿ ಅವರ ಟೆನ್ನಿಸ್ ಭಾರತೀಯಳ ದಾಖಲೆ ಮುರಿಯುವವರು ಬರಲೇಬೇಕಾಗಿದೆ. ಕೆಲವರು ಮೂಡಿ ಬಂದರೂ ವಿಶ್ವ ಮಟ್ಟ ಮುಟ್ಟಲಿಲ್ಲ. ಹೈದರಾಬಾದ್ ಮೂಲದ ಸಾನಿಯಾ ಮಿರ್ಜಾ ಈಗ ದುಬಾಯಿ ವಾಸಿ. 2003ರಿಂದ 2013ರವರೆಗೆ ಸಾನಿಯಾ ಮಿರ್ಜಾ ಭಾರತದ ನಂಬರ್ ಒನ್ ಮತ್ತು ಜಾಗತಿಕಯ ಮಹಿಳಾ ಡಬಲ್ಸ್ ನಂಬರ್ ಒನ್ ಆಗಿದ್ದರು ಎನ್ನುವುದು ವಿಶೇಷ. ಇವರು 3 ಮಹಿಳಾ ಡಬಲ್ಸ್ ಮತ್ತು 3 ಮಿಕ್ಸೆಡ್ ಡಬಲ್ಸ್ ಎಂದು 6 ಗ್ರಾನ್‍ಸ್ಲಾಮ್ ಮತ್ತು ಹಲವಾರು ಟೆನ್ನಿಸ್ ವಿಜಯ ಕಂಡವರು. ಏಶಿಯನ್ ಮೊದಲಾದವುಗಳಲ್ಲಿ ಮಿಂಚಿದ್ದಾರೆ. ಜಾಗತಿಕ ಟೆನ್ನಿಸ್ ಸಿಂಗಲ್ಸ್ 27ನೇ ರಿಯಾಂಕಿಗೇರಿದ ಏಕೈಕ ಭಾರತೀಯರು ಇವರು. ಆ ಸಂದರ್ಭದಲ್ಲಿ ಜಾಗತಿಕ ಟೆನ್ನಿಸ್ ತಾರೆಯರಾಗಿದ್ದ ಸ್ವೆಟ್ಲಾನಾ, ಬಾರ್ಡೋಲಿ, ಜ್ವೆನರೇವಾ, ಮಾರ್ಟಿನಾ, ಸಫೀನಾ, ಅಜರೆಂಕಾ ಮೊದಲಾದವರನ್ನು ಸೋಲಿಸಿದ್ದರು ಎಂಬುದು ವಿಶೇಷ. ಭಾರತೀಯ ಕ್ರಿಕೆಟ್ ಭ್ರಮೆಯ ನಡುವೆ ಬೆಳೆದ ಸಾನಿಯಾ ಮಿರ್ಜಾ ಕ್ರಿಕೆಟಿಗ ಶೋಯೆಬ್‍ರನ್ನು ಮದುವೆಯಾಗಿ ಈಗ ಭ್ರಮ ನಿರಸನರಾಗಿ ಬೇರೆ ಆಗಿದ್ದಾರೆ. ಒಬ್ಬ ಮಗ ಇದ್ದಾನೆ. ಇವರನ್ನು ಸಿನಿಮಾ ನಾಯಕಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅದು ಮಾತುಕತೆಗಿಂತ ಮೇಲೆ ಏರಲಿಲ್ಲ. ಅಮೃತರಾಜ್ ಸಹೋದರರು ಹಾಲಿವುಡ್ ಚಿತ್ರ ರಂಗದ ನಂಟಿನವರು. ವಿಜಯ ಅಮೃತರಾಜ್ ಬಾಂಡ್ ಸಿನಿಮಾ ಸೇರಿ ಕೆಲವದರಲ್ಲಿ ನಟಿಸಿದ್ದಾರೆ.

ಮಹೇಶ್ ಭೂಪತಿ ಇನ್ನೊಬ್ಬ ಪ್ರತಿಭಾವಂತ ಭಾರತೀಯ ಡಬಲ್ಸ್ ಟೆನ್ನಿಸ್ ಪ್ರತಿಭೆ. 1992ರಲ್ಲಿ ಮೊದಲು ಆಸ್ಟ್ರೇಲಿಯಾ ಓಪನ್‍ನಲ್ಲಿ ಮಿಕ್ಸೆಡ್ ಡಬಲ್ಸ್ ಗೆದ್ದು ಮೊದಲ ಭಾರತೀಯ ಡಬಲ್ಸ್ ಗ್ರಾನ್‍ಸ್ಲಾಮ್ ಗೆಲುವಿಗ ಎನಿಸಿದವರು. ಇವರು ಕೂಡ ಜಾಗತಿಕ ಡಬಲ್ಸ್ ನಂಬರ್ ಒನ್ ಆಗಿದ್ದ ಕಾಲವಿತ್ತು. ಅರ್ಧ ಡಜನ್‍ಗೂ ಹೆಚ್ಚು ಡಬಲ್ಸ್ ಗ್ರಾನ್‍ಸ್ಲಾಮ್ ವಿಜೇತರು ಇವರು. ಈಗ ರೋಹನ್ ಬೋಪಣ್ಣರು ಭೂಪತಿ ಅವರ ಜಾಗಕ್ಕೆ ಬಂದಿದ್ದಾರೆ. ಪಾಕಿಸ್ತಾನದ ಆಸಿಮ್ ಉಲ್ ಹಕ್ ಖುರೇಷಿ ಜೊತೆಗೆ ಕೆಲವು ವಿಜಯಗಳನ್ನು ರೋಹನ್ ಬೋಪಣ್ಣ ಕಂಡಿದ್ದಾರೆ. ಯುಎಸ್ ಓಪನ್ ಫೈನಲ್ ಎಂದೆಲ್ಲ ಏರಿದರೂ ಈ ಜೋಡಿ ಗ್ರಾನ್‍ಸ್ಲಾಮ್ ಗೆಲುವು ಕಾಣಲಿಲ್ಲ. 2022ರಲ್ಲಿ ಒಮ್ಮೆ ಬೋಪಣ್ಣ ನಿವೃತ್ತಿ ಘೋಷಣೆ ಮಾಡಿದ್ದರು. ಅರ್ಧ ವರುಷ ಟೆನ್ನಿಸ್‍ನಿಂದ ದೂರ ಇದ್ದರು. ಆದರೂ ಮರಳಿ ಬಂದುದು ಅವರಿಗೆ ಮತ್ತು ಭಾರತಕ್ಕೆ ಫಲ ತಂದಿದೆ.

Related Posts

Leave a Reply

Your email address will not be published.