ಸಂಗಬೆಟ್ಟು: ಸಾರ್ವಜನಿಕ ರಸ್ತೆ ಸಂಚಾರಕ್ಕೆ ತಡೆ

ಬಂಟ್ವಾಳ: ಸಾರ್ವಜನಿಕ ರಸ್ತೆಗೆ ತಡೆವೊಡ್ಡಿದ ಪ್ರಕರಣವೊಂದು ಸಂಗಬೆಟ್ಟು ಗ್ರಾಮದಲ್ಲಿ ನಡೆದಿದ್ದು ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಿಸರದ ನಿವಾಸಿಗಳು ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಡಿ ಪಲ್ಕೆ ಮುಗೇರು ಎಂಬಲ್ಲಿ ನೂರಾರು ವರ್ಷಗಳ ಕಾಲದಿಂದ ಸಾರ್ವಜನಿಕರು, ಶಾಲಾ ಮಕ್ಕಳು, ನಿತ್ಯ ವ್ಯವಹಾರ ವಹಿವಾಟುಗಳಿಗೆ ಹೋಗುವವರು, ಸ್ಥಳೀಯ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವವವರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.
ಇತ್ತೀಚೆಗೆ ರಾಮಕೃಷ್ಣ ಚೌಟ ಮತ್ತು ರತ್ನ ಕುಮಾರ್ ಚೌಟ ಎಂಬವರು ಜೆಸಿಬಿ ಮುಖಾಂತರ ರಸ್ತೆಯನ್ನು ಅಗೆದು ದೊಡ್ಡ ದೊಡ್ಡ ಹೊಂಡಗಳನ್ನು ಮಾಡಿ, ರಸ್ತೆಯನ್ನು ಅತಿಕ್ರಮಣ ಮಾಡಲು ಪ್ರಯತ್ನಿಸಿದ್ದು ಶಾಲಾ ಮಕ್ಕಳು, ಸಾರ್ವಜನಿಕರು ನಡೆದಾಡಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಮಳೆ ಬರುವ ಸಂದರ್ಭದಲ್ಲಿ ರಸ್ತೆಯಲ್ಲಿ ತೆಗೆದ ಹೊಂಡದಲ್ಲಿ ನೀರು ತುಂಬಿಕೊಂಡು ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಬಗ್ಗೆ ಸಾರ್ವಜನಿಕರೊಬ್ಬರು ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪೋಲಿಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಮುಂದೆ ಏನಾದರೂ ಅಪಾಯ ಸಂಭವಿಸಿದರೆ ಅಧಿಕಾರಿ ವರ್ಗದವರೇ ಹೊಣೆಯಾಗುತ್ತಾರೆ. ಅದಕ್ಕಿಂತ ಮುಂಚೆ ಆಡಳಿತ ವರ್ಗ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published.