ಕೊಲ್ಲುವ ಮನಸ್ಥಿತಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು : ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೋಳಿ

” ಕೊಲ್ಲುವ ಮನಸ್ಥಿತಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು. ಒಂಬತ್ತು ಪುಟಗಳ ಕ್ರಿಮಿನಲ್ ಕೇಸುಗಳ ವರದಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು. ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿ ಉಡುಪಿಯ ಶಾಸಕನಾಗುತ್ತಾನೆಂದರೆ ಅದು ಉಡುಪಿಯ ಸ್ವಾಭಿಮಾನದ ಪ್ರಶ್ನೆ.” ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ. ಅವರು ನಿನ್ನೆ ಪರ್ಕಳದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿ ಮತ್ತು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

” ಬಿಜೆಪಿಗೆ ನೂರು ಜನ್ಮವೆತ್ತಿ ಬಂದರೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ಕ್ಷೀರ ಭಾಗ್ಯ, ಅನ್ನ ಭಾಗ್ಯ, ಲ್ಯಾಪ್ಟಾಪ್, ಶೂ ಭಾಗ್ಯ, ಮನಸ್ವಿನಿ ಮುಂತಾದ 167 ಭರವಸೆಯನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈಡೇರಿಸಿದೆ. ಮನೆ (ನಿವೇಶನ), ಸಾಲಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಉದ್ಯೋಗ ಕೊಡಿ ಅಂದರೆ ಬಿಜೆಪಿಗರು ಜಟ್ಕಾ-ಹಲಾಲ್ ಕಟ್, ಹಿಜಾಬ್-ಅಜಾನ್ ಎನ್ನುತ್ತಾರೆ. ಗೋವಾದಲ್ಲಿ ಬಿಜೆಪಿ ಸರ್ಕಾರ ಶ್ರೀರಾಮ ಸೇನೆಯನ್ನು ನಿಷೇಧಿಸಿತ್ತು. ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು.” ಎಂದರು.

ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ” ಜನರಿಗೆ ನೀರಿಲ್ಲ, ಉದ್ಯೋಗವಿಲ್ಲ, ಡ್ರೈನೇಜ್ ಆಗಿಲ್ಲ ಎಂದು ಜನರು ಅಳುತಿದ್ದಾರೆ. ಇದೆಲ್ಲದಕ್ಕೂ ಪರಿಹಾರವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅನಿವಾರ್ಯತೆ ಇದೆ. ವರ್ಷದಲ್ಲಿ ಸುಮಾರು 27,000 ಯುವಕರು ಪದವಿ ಮುಗಿಸಿ ಹೊರಬರುತ್ತಾರೆ. ಯುವಕರ ಉದ್ಯೋಗಕ್ಕಾಗಿ ಯಾವುದೇ ಒಂದು ಇಂಡಸ್ಟ್ರೀಯನ್ನು ಸ್ಥಾಪಿಸಿಲ್ಲವೆಂಬ ಕಾರಣಕ್ಕೆ ಈ ಭೃಷ್ಟ ಸರಕಾರವನ್ನು ಸೋಲಿಸಬೇಕು. ಪ್ರವಾಸೋದ್ಯಮದಲ್ಲಿ ಕಮಿಷನ್ ಏಜೆಂಟರಂತೆ ಬಿಜೆಪಿ ವರ್ತಿಸುತ್ತಿದೆ. ಬಿಜೆಪಿ ಮೀನುಗಾರಿಕಾ ಜಟ್ಟಿಯನ್ನು ಅಭಿವೃದ್ಧಿಪಡಿಸಿಲ್ಲ. ನಾಡದೋಣಿಗೆ ಸೀಮೆ ಎಣ್ಣೆ ನೀಡಲಿಲ್ಲ. ಕೃಷಿಕರಿಗೂ ಬಿಜೆಪಿ ಯಾವುದೇ ಉತ್ತೇಜನ ನೀಡಿಲ್ಲ.” ಎಂದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ರಾಜ್ಯ ಸಂವಹನ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಸುಕೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.