ಎಸ್.ಡಿ.ಎಂ. ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ – ‘ಎಸ್.ಡಿ.ಎಂ. ನೆನಪಿನಂಗಳ’
ಉಜಿರೆ: ಜ್ಞಾನ, ಧನಾತ್ಮಕ ಮನೋಧೋರಣೆ ಹಾಗೂ ಕೌಶಲದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು. ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮೇ 31ರಂದು ನಡೆದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) ‘ಎಸ್.ಡಿ.ಎಂ. ನೆನಪಿನಂಗಳ’ದ ನಾಲ್ಕನೆಯ ಕಂತಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ್ಞಾನದ ಜತೆಗೆ ಉತ್ತಮ ಮನೋಧೋರಣೆಯೂ ಇರಬೇಕು. ಹಾಗಿದ್ದಾಗ ಅವಕಾಶಗಳು ಲಭ್ಯವಾಗುತ್ತವೆ. ಕೌಶಲವೂ ಜತೆಗೂಡಿದಾಗ ಅಸಾಧಾರಣವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಾಡುವ ಕೆಲಸದಲ್ಲಿ ತನ್ಮಯತೆ, ಸಮರ್ಪಣೆ ಹಾಗೂ ಆಶಾವಾದ ಇರುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.
“ವಿದ್ಯಾರ್ಥಿಗಳು ಕೆಲಸವನ್ನು ವಿಭಿನ್ನವಾಗಿ ಮಾಡಿ. ನಿಮ್ಮಲ್ಲಿ ಸಾಮರ್ಥ್ಯವಿದೆ. ಗುರಿ ಇರಲಿ. ಸವಾಲುಗಳನ್ನು ಸ್ವೀಕರಿಸಿ. ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಿ. ಅವಕಾಶಗಳನ್ನು ಬಳಸಿಕೊಳ್ಳಿ. ಸದಾ ಕ್ರಿಯಾಶೀಲರಾಗಿರಿ, ಅತ್ಯುತ್ತಮ ಸಂಗತಿಗಳನ್ನು ನಿಮ್ಮದಾಗಿಸಿಕೊಳ್ಳುತ್ತ ಬೆಳೆಯಿರಿ” ಎಂದು ಅವರು ಸಲಹೆ ನೀಡಿದರು.
ತಾವು ಎಸ್.ಡಿ.ಎಂ. ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಹಾಗೂ ಉದ್ಯೋಗಿಯಾಗಿದ್ದಾಗಿನ ಸಂದರ್ಭ, ಸಿದ್ಧವನ ಗುರುಕುಲದಲ್ಲಿನ ನೆನಪುಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ದಿ. ಡಾ. ಬಿ. ಯಶೋವರ್ಮ ಅವರೊಂದಿಗಿನ ಒಡನಾಟದ ಕ್ಷಣಗಳು ಹಾಗೂ ತಾವು ಜೀವನದಲ್ಲಿ ಸಾಧಿಸಿದ ಮಹತ್ವದ ಮಜಲುಗಳ ಬಗ್ಗೆ ಅವರು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ಯುವರಾಜ್ ಜೈನ್ ಅವರು ವಿದ್ಯಾರ್ಥಿ ದೆಸೆಯಿಂದಲೂ ಸಾಂಸ್ಕೃತಿಕವಾಗಿ ಮತ್ತು ಸಂಸ್ಕಾರ ಹಾಗೂ ಹೃದಯವೈಶಾಲ್ಯದ ದೃಷ್ಟಿಯಿಂದ ಸಮೃದ್ಧ- ಶ್ರೀಮಂತರು. ಅವರಿಂದ ಪ್ರಸ್ತುತ ವಿದ್ಯಾರ್ಥಿಗಳು ಪ್ರೇರಣೆ ಪಡೆದು, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು” ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿ- ದ್ವಿತೀಯ ಬಿ.ಎಸ್ಸಿ.ಯ ತೇಜಸ್ ಅವರಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ 5,000 ರೂ. ಪ್ರೋತ್ಸಾಹಧನ ವಿತರಿಸಲಾಯಿತು. ಅತಿಥಿಗಳನ್ನು ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ, ಮೇ 31ರಂದು ನಿಧನ ಹೊಂದಿದ ನಿವೃತ್ತ ಎಸಿಪಿ, ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರ ಹಿರಿಯ ಸಹೋದರ ಸುರ್ಯಗುತ್ತು ಸುಭಾಶ್ಚಂದ್ರ ಅವರಿಗೆ ಸದ್ಗತಿ ಕೋರಿ ಮೌನಾಚರಣೆ ನಡೆಸಲಾಯಿತು.
ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗುರುನಾಥ್ ಪ್ರಭು ಉಪಸ್ಥಿತರಿದ್ದರು. ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು. ಅಂತಿಮ ಬಿ.ಎಸ್ಸಿ.ಯ ವಿದ್ಯಾರ್ಥಿನಿಯರಾದ ವೈಷ್ಣವಿ ಮತ್ತು ತಂಡದವರು ಪ್ರಾರ್ಥಿಸಿ, ಶ್ರದ್ಧಾ ವಂದಿಸಿದರು.