ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ
ಪರ್ಲಾಣಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ತನ್ನ ಸುವರ್ಣೋತ್ಸವದಲ್ಲಿ ಇದ್ದು , 2022 -23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪರ್ಲಾಣಿಯಲ್ಲಿ ಆಯೋಜಿಸಲಾಗಿದೆ. ಏಳು ದಿನಗಳ ವಿಶೇಷ ಶಿಬಿರವು ಗುರುವಾರದಂದು ಗಣ್ಯರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು.
“ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವ ಜನತೆ” ಎಂಬ ಧ್ಯೆಯ ವಾಕ್ಯದಡಿಯಲ್ಲಿ ಪ್ರಾರಂಭಗೊಂಡ ಈ ವಿಶೇಷ ಶಿಬಿರವನ್ನು ಚಾರ್ಮಾಡಿಯ ಪ್ರಗತಿಪರ ಕೃಷಿಕರಾದ ಶ್ರೀ ಅನಂತ ರಾವ್ ಮಠದ ಮಜಲು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಕಲ್ಪನೆ ಮತ್ತು ಸಾಕಾರ ಒಳ್ಳೆಯ ರೀತಿಯಲ್ಲಿ ಆಗುತ್ತಿದ್ದು, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ರೀತಿಯ ಯೋಚನೆಗಳು, ಯೋಜನೆಗಳು ಕ್ರಮಬದ್ಧವಾಗಿ ಆಗುತ್ತಿರಬೇಕು. ಇದಕ್ಕೆ ನಮ್ಮ ಊರಿನ ಸಹಕಾರ ಇದ್ದೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಎಂದರೆ ಅದು ಒಂದು ಕಟಿಬದ್ದ ಸಂಘಟನೆಯ ಶಿಬಿರ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಡೀನ್ ಆದ ಡಾ. ಪಿ .ವಿಶ್ವನಾಥ್ ಅವರು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ ಎನ್ಎಸ್ಎಸ್ ನಮ್ಮ ದೇಶದ ಒಂದು ಅದ್ಭುತ ಯೋಜನೆ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಜೀವನ ಶಿಕ್ಷಣ ಕಲಿಸುವ ಯೋಜನೆಯಾಗಿದೆ. ಎನ್ಎಸ್ಎಸ್ ಶಿಬಿರದಿಂದ ಈ ಶಾಲೆಯ ಮಕ್ಕಳ ವ್ಯಕ್ತಿತ್ವ ವಿಕಸನ ಆಗುತ್ತೆ ಜೊತೆಗೆ ಊರಿನ ಜನರಿಗೂ ಉಪಯುಕ್ತವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ಡಿಎಂ ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಆದ ಡಾ. ಬಿ. ಎ. ಕುಮಾರ ಹೆಗ್ಡ ಮಾತಾನಾಡಿ ಈ ಶಿಬಿರದ ಏಳು ದಿನ ಜೀವನ ಪರ್ಯಂತ ನೆನಪಿಡಬೇಕಾದ್ದು. ಶಿಬಿರದಲ್ಲಿ ನಡೆಯುವ ಕಾರ್ಯಕ್ರಮಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿವೆ. ಕಾಯಕವೇ ಕೈಲಾಸ- ಶ್ರಮದ ಬೆಲೆ ಎಲ್ಲ ಸ್ವಯಂಸೇವಕರಿಗೆ ಅರ್ಥವಾಗಬೇಕು, ಅದೇ ಈ ಶಿಬಿರದ ಮೂಲ ಉದ್ದೇಶ ಎಂದು ಬಸವಣ್ಣನವರ ಮಾತುಗಳನ್ನು ನೆನೆದರು.
ಎನ್ಎಸ್ಎಸ್ ಸ್ವಯಂಸೇವಕರಿಂದ ಕಲಾತ್ಮಕವಾಗಿ ರಚಿತವಾದ ಬಿತ್ತಿ ಪತ್ರವನ್ನು ಪ್ರಗತಿಪರ ಕೃಷಿಕರಾದ ಹಮಿದ್ ಸರ್ಪಿತ್ತಿಲು ಅವರು ಬಿಡುಗಡೆಗೊಳಿಸಿದರು. ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಪರ್ಲಾಣಿಯ ಮುಖ್ಯೋಪಾಧ್ಯಾಯರಾದ ಬಿ. ತಮ್ಮಯ್ಯ ಶಿಬಿರದಿಂದ ಶಾಲಾಭಿವೃದ್ಧಿಗೆ ಪೂರಕವಾಗುವ ಅಂಶಗಳು ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭ, ವೇದಿಕೆಯಲ್ಲಿರುವ ಎಲ್ಲ ಗಣ್ಯರಿಗೆ ಸ್ವಯಂಸೇವಕರಿಂದಲೇ ತಯಾರಾಗಿದ್ದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕೆ. ಕೃಷ್ಣಪ್ರಸಾದ್ ಪುತ್ತಿಲ, ಶಾಲೆಯ ಶಿಕ್ಷಕರು, ಊರಿನ ಪ್ರಮುಖರು, ಶಿಬಿರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿರುವ ಗ್ರಾಮಸ್ಥರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮಿನಾರಾಯಣ ಕೆ.ಎಸ್ ಎಲ್ಲರನ್ನು ಸ್ವಾಗತಿಸಿ, ಶ್ರೀಮತಿ ದೀಪ ಆರ್. ಪಿ ವಂದಿಸಿದರು. ಸ್ವಯಂಸೇವಕಿಯಾದ ನೂಪುರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.


















