19ನೆಯ ಶತಮಾನದಲ್ಲಿಯೇ ಕನ್ನಡದಲ್ಲಿ ಅತ್ಯದ್ಭುತ ಸಾಹಿತ್ಯಿಕ ಅಧ್ಯಯನದ ಕೆಲಸಗಳ ಪ್ರಾರಂಭ

ಉಜಿರೆ, ಆ.18: ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಗಮನಿಸಿದಾಗ ಕಾವ್ಯ ಮತ್ತು ಶಾಸ್ತ್ರ ಎಂಬ ಎರಡು ಬಗೆಯ ಸ್ರೋತ (ಪ್ರವಾಹ) ಗಳನ್ನು ಕಾಣಬಹುದಾಗಿದ್ದು, ಈ ಎರಡೂ ನೆಲೆಗಳಲ್ಲಿ ಕನ್ನಡ ಭಾಷೆಯು ಪರಿಪುಷ್ಟವಾಗಿ ಬೆಳೆದಿದೆ. 19ನೆಯ ಶತಮಾನದಲ್ಲಿಯೇ ಕನ್ನಡದಲ್ಲಿ ಅತ್ಯದ್ಭುತ ಸಾಹಿತ್ಯಿಕ ಅಧ್ಯಯನದ ಕೆಲಸಗಳು ಪ್ರಾರಂಭವಾದವು ಎಂದು ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತ ಕುಮಾರ ಅವರು ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದಲ್ಲಿ ಇಂದು (ಆ.18) ನಡೆದ ‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಚಾರ ಮಂಡಿಸಿದರು.

19ನೆಯ ಶತಮಾನದಲ್ಲಿ ಕಾವ್ಯ ಮತ್ತು ಶಾಸ್ತ್ರ (ಛಂದಸ್ಸು, ಅಲಂಕಾರ, ವ್ಯಾಕರಣ..)ದ ನೆಲೆಗಳಲ್ಲಿ ಸಾಹಿತ್ಯಿಕ ಅಧ್ಯಯನ ನಡೆದಿರುವುದನ್ನು ಕಾಣಬಹುದು. ಆ ಸಂದರ್ಭದಲ್ಲಿಯೇ ಪ್ರಾರಂಭಿಕ ಹಂತದ ಅನೇಕ ಕನ್ನಡ ಕಾವ್ಯ ಕೃತಿಗಳು ಬೆಳಕಿಗೆ ಬಂದವು. ‘ವಡ್ಡಾರಾಧನೆ’, ‘ಕವಿರಾಜಮಾರ್ಗ’, ‘ಸಾಹಸಭೀಮ ವಿಜಯ’,‘ಯಶೋಧರ ಚರಿತೆ’, ವಿಕ್ರಮಾರ್ಜುನ ವಿಜಯ’, ‘ಗದುಗಿನ ಭಾರತ’ ಇತ್ಯಾದಿ ಕೃತಿಗಳು ಬೆಳಕಿಗೆ ಬಂದ ಒಂದು ಸ್ವರ್ಣ ಕಾಲ ಎಂದು ಈ ಅವಧಿಯನ್ನು ಪರಿಗಣಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

1850-1950ರ ನಡುವಿನ ಕಾಲಾವಧಿಯನ್ನು ಪ್ರಾರಂಭಿಕ ಪ್ರಯತ್ನದ ಅವಧಿ ಎಂದಿಟ್ಟುಕೊಂಡು, ಆ ಕಾಲದಲ್ಲಿ ನಡೆದ ಸಾಹಿತ್ಯಿಕ ಅಧ್ಯಯನದ ಕುರಿತು ಬೆಳಕು ಚೆಲ್ಲಿದ ಅವರು, “ಆ ಕಾಲದಲ್ಲಿ ನಡೆದ ತೌಲನಿಕ ವಿವೇಚನೆ, ತೌಲನಿಕ ಅಧ್ಯಯನಗಳಿಗೆ ಕೂಡ ಒಂದು ಯೋಗ್ಯವಾದ ವೇದಿಕೆ ಕೂಡ ಆ ಕಾಲದಲ್ಲಿಯೇ ಸ್ಥಾಪನೆಯಾಗಿದ್ದನ್ನು ಕಾಣಬಹುದು” ಎಂದರು. ಅಂದಿನ ಪ್ರಾರಂಭಿಕ ಹಂತದಲ್ಲಿ ತೌಲನಿಕ ಅಧ್ಯಯನಕ್ಕೆ ಆಧುನಿಕ ಹತಾರಗಳು ಲಭ್ಯವಿರದಿದ್ದ ಹಿನ್ನೆಲೆಯಲ್ಲಿ ಕವಿಗಳು ಸಂಸ್ಕೃತ-ಕನ್ನಡ ಸಂಬಂಧ, ಪ್ರಾಕೃತ-ಕನ್ನಡ ಸಂಬಂಧವನ್ನು, ಇತರ ದೇಶಭಾಷೆಗಳ ಸಂಬಂಧವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ನೋಡುವ ಪ್ರಯತ್ನ ಮಾಡಿದರು ಎಂದು ಅವರು ವಿಶ್ಲೇಷಿಸಿದರು.

ಕೃತಿಗಳು ಮೂಲದಿಂದ ಹೇಗೆ ಭಿನ್ನವಾಗಿವೆ ಎಂಬುದರ ಬಗ್ಗೆ ಪ್ರಾರಂಭಿಕ ಹಂತದ ಅಧ್ಯಯನಕಾರರು ವಿಶೇಷ ಲಕ್ಷ್ಯ ವಹಿಸಿದ್ದಾರೆ. ವ್ಯಾಸನ ಮಹಾಭಾರತದಲ್ಲಿ ಇಲ್ಲದ ‘ವಿದುರ ಧನುರ್ಭಂಗ’ ಪ್ರಸಂಗವು ಕುಮಾರವ್ಯಾಸ ಭಾರತ, ಪಂಪಭಾರತದಲ್ಲಿ ಇದೆ. ಗಂಗೆಯು ಕರ್ಣನನ್ನು ಕುಂತಿಗೆ ಹಸ್ತಾಂತರಿಸುವ ಪ್ರಸಂಗ ಕೂಡ ಇದೆ. ಈ ರೀತಿ ತೌಲನಿಕ ವಿವೇಚನೆ ಪ್ರಾರಂಭಿಕ ಹಂತದಲ್ಲಿ ಇತ್ತು. ಪುರಾಣಭಂಜನ ಪ್ರಕ್ರಿಯೆ ನಡೆದಿದೆ. ಹೊಸ ಪುರಾಣ ರಚನೆಯಾಗಿದೆ. ಇದಕ್ಕೆ ಜಾನಪದದ ಹಿನ್ನೆಲೆಯೂ ಇರಬಹುದು. ಈ ರೀತಿಯ ಅಧ್ಯಯನಗಳಿಗೆ ಪ್ರಾರಂಭಿಕ ಹಂತವು ಅಸ್ತಿವಾರ ಕಲ್ಪಿಸಿದೆ ಎಂದು ಅವರು ತಿಳಿಸಿದರು.

“ವಿದ್ಯಾರ್ಥಿಗಳು ಹಳೆಗನ್ನಡ ಪದ್ಯಗಳಿಗೆ ಮುಖಾಮುಖಿಯಾಗಬೇಕು. ಅವುಗಳು ಕಷ್ಟ, ಸ್ವಾರಸ್ಯರಹಿತ ಎಂದುಕೊಳ್ಳಬಾರದು. ಸ್ವಾರಸ್ಯ ಇದೆ. ಆಸಕ್ತಿ ವಹಿಸಿ ಅಧ್ಯಯನ ನಡೆಸಿದರೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಪ್ರಯತ್ನ ಸಾರ್ಥಕ” ಎಂದು ಅವರು ಹೇಳಿದರು.

Related Posts

Leave a Reply

Your email address will not be published.