ಶಿಷ್ಟಾಚಾರ ಉಲ್ಲಂಘಿಸಿ ಶಾಂತಿ ಸಭೆ‌. ಸಿಪಿಐಎಂ ಖಂಡನೆ

ಸರಣಿ ಕೊಲೆಗಳ ಹಿನ್ನಲೆಯಲ್ಲಿ ಜಿಲ್ಲಾಡಳಿತ ಇಂದು ನಡೆಸಿದ ಶಾಂತಿ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಸಿಪಿಐಂ ದ ಕ ಜಿಲ್ಲಾ ಸಮಿತಿ ಆಪಾದಿಸಿದೆ. ಜಿಲ್ಲಾಡಳಿತ ನಡೆಸುವ ಶಾಂತಿ ಸಭೆಗಳಲ್ಲಿ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳಿಗೆ ಆಹ್ವಾನ ನೀಡುವುದು ಅಧಿಕೃತ ಕ್ರಮ. ಜೊತೆಯಲ್ಲಿ ಸಮುದಾಯದ ಮುಖಂಡರು, ವಿವಿಧ ವಿಭಾಗಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. ಇದು ರೂಢಿಗತ ಕ್ರಮ ಮಾತ್ರವಲ್ಲದೆ ಶಾಂತಿ ಸಭೆಯ ಶಿಷ್ಟಾಚಾರವೂ ಆಗಿದೆ.

ಆದರೆ ಜಿಲ್ಲಾಡಳಿತ ಇಂದು ನಡೆಸಿದ ಶಾಂತಿ ಸಭೆಯಲ್ಲಿ ಅಧಿಕೃತ ರಾಜಕೀಯ ಪಕ್ಷಗಳನ್ನು ಆಹ್ವಾನಿಸದೆ ಪೂರ್ತಿಯಾಗಿ ಹೊರಗಿಡಲಾಗಿದೆ. ಅಧಿಕಾರಿಗಳ ಮರ್ಜಿಗೆ ಅನುಸಾರ ಆಯ್ದ ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗಿದೆ. ವಿರೋಧ ಪಕ್ಷಗಳನ್ನು ಅಪ್ರಸ್ತುತಗೊಳಿಸುವ ಇಂತಹ ನಡೆ ಅಪಾಯಕಾರಿಯಾದದ್ದು. ಅದಲ್ಲದೆ ಇಂದಿನ ಸಭೆಯಲ್ಲಿ ಆಳುವ ಪಕ್ಷದ ಶಾಸಕರುಗಳು ಹಾಗೂ ಸಾಮಾಜಿಕ, ಧಾರ್ಮಿಕ ಸೋಗಿನಲ್ಲಿರುವ ಆ ಪಕ್ಷದ ಸಹೋದರ ಸಂಘಟನೆಗಳ ಪ್ರತಿನಿಧಿಗಳೂ ಭಾಗವಹಿಸದೆ ಬಹಿಷ್ಕರಿಸಿರುವುದು ಶಾಂತಿ ಸಭೆಯ ಔಚಿತ್ಯವನ್ನೇ ಪ್ರಶ್ನಾರ್ಹಗೊಳಿಸಿದೆ. ಮುಖ್ಯಮಂತ್ರಿ, ಶಾಸಕರುಗಳೇ ಮುಂದೆ ನಿಂತು ತಮ್ಮ ಮೇಲೆ ತಾರತಮ್ಯ ಎಸಗುತ್ತಿರುವಾಗ ಅಲ್ಪಸಂಖ್ಯಾತ ಸಮುದಾಯ ಶಾಂತಿ ಸಭೆಯ ಆಹ್ವಾನವನ್ನು ತಿರಸ್ಕರಿಸಿರುವುದು ಸರಿಯಾಗಿಯೇ ಇದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಈಗಲಾದರು ಪಕ್ಷ, ಧರ್ಮಾಧಾರಿತವಾಗಿ ತಾರತಮ್ಯ ಎಸಗುವುದನ್ನು ಕೈ ಬಿಟ್ಟು ಸಂವಿಧಾನಕ್ಕೆ ನಿಷ್ಟವಾಗಿ ಕಾರ್ಯಾಚರಿಸಲು ಮುಂದಾಗವುದು ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಲಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಾಚರಿಸಲಿ ಎಂದು ಸಿಪಿಐಎಂ ದಕ್ಷಿಣ ಕ‌ನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಕಾರ್ಯದರ್ಶಿ ಯಾದವ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.