ಶಿವಪಾಡಿಯ ಅತಿರುದ್ರ ಮಹಾಯಾಗ : “ದುಡ್ಡಿಗಿಂತ ಸಾತ್ವಿಕ ತೇಜಸ್ಸು ಬಹುದೊಡ್ಡದು” ಶ್ರೀಕಾಂತ್ ಶೆಟ್ಟಿ ಕಾರ್ಕಳ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 26, 2023 ರ ಭಾನುವಾರದಂದು ನಡೆದ ಅತಿರುದ್ರ ಮಹಾಯಾಗದ ಐದನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಡೀನ್ ಆಗಿರುವಂತಹ ಡಾ. ಪದ್ಮರಾಜ್ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ, ಉಡುಪಿ ಎಚ್ ಎಂ ಟಿ ಮೋಟರ್ಸ್ ನ ಗಣನಾಥ್ ಹೆಗ್ಡೆ, ಕಲ್ಯಾಣಿ ಕಾಂಕ್ರೀಟ್ ನ ಉದ್ಯಮಿಯಾದ ಗಣೇಶ್ ಪ್ರಭು, ಉದ್ಯಮಿಯಾದ ರಂಜಿತ್ ಶೆಟ್ಟಿ, ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ ಕಿರಣ್ ಮಂಜನಬೈಲು, ದಕ್ಷಿಣ ಕನ್ನಡ ಮತ್ತು ಉಡುಪಿಯ ಗುರುವಂದನಾ ಸಮಿತಿಯ ಅಧ್ಯಕ್ಷರಾದ ಮಾಧವ ಖಾರ್ವಿ, ಉಡುಪಿ ಜಿಲ್ಲಾ ಹಿಂದೂ ಜಾಗರಣ ಸಮಿತಿ ವೇದಿಕೆಯ ಜಿಲ್ಲಾ ಸಮಿತಿಯ ಸದಸ್ಯರಾದ ಹಾಗೂ ಪ್ರಖರ ವಾಗ್ಮಿ ಶ್ರೀಕಾಂತ್ ಶೆಟ್ಟಿ, ಬಂಟರ ಚಾವಡಿ ಪರ್ಕಳ ಘಟಕದ ತಾರಾನಾಥ್ ಹೆಗ್ಡೆ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಮೊಕ್ತೇಸರರು, ಆಡಳಿತ ಸಮಿತಿಯ ಸದಸ್ಯರು ಮತ್ತು ಅತಿರುದ್ರ ಮಹಾಯಾಗ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ನಂತರ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿದ ಶ್ರೀಕಾಂತ್ ಶೆಟ್ಟಿಯವರು, ಶಿವನನ್ನು ನಾನಾ ರೂಪಗಳಲ್ಲಿ ಕಾಣುತ್ತಾರೆ, ಅನೇಕ ರೀತಿಯಲ್ಲಿ ಶಿವನನ್ನು ಉಪಾಸನೆ ಮಾಡುತ್ತಾರೆ. ನೀವು ಯಾವ ರೀತಿಯಲ್ಲಿ ಉಪಾಸನೆ ಮಾಡುತ್ತೀರೋ, ಆ ರೀತಿಯಲ್ಲಿ ಅವನು ಕಾಣಿಸಿಕೊಳ್ಳುತ್ತಾನೆ. ದುಡ್ಡಿಗಿಂತ ಸಾತ್ವಿಕ ತೇಜಸ್ಸು ಬಹುದೊಡ್ಡದು. ಶಿವನ ಸಾತ್ವಿಕವಾದ ಶಕ್ತಿಯ ಜೊತೆಗೆ ಮುನ್ನಡೆಸುವಂತಹ ಕೆಲಸಕ್ಕೆ ನಾವೆಲ್ಲಾ ಮುಂದಾಗೋಣ ಎಂದು ಭಾರತದಲ್ಲಿ ಯಾವೆಲ್ಲ ರೀತಿಯಲ್ಲಿ ಶಿವನನ್ನು ಆರಾಧಿಸುತ್ತಾರೆಂದು ಹೇಳುತ್ತಾ ಭಾರತದ ಐಕ್ಯತೆಯಲ್ಲಿ ಶಿವನ ಪಾತ್ರವನ್ನು ತಿಳಿಸಿದರು. ಶಿವಪಾಡಿಯ ಮಣ್ಣಿನಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಎಲ್ಲರಿಗೂ ಪ್ರೇರಣೆಯಾಗಲಿ ಮತ್ತು ಉಡುಪಿಗೆ ಹೊಸ ಚೈತನ್ಯವನ್ನು ತುಂಬಲಿ ಎಂದು ಹಾರೈಸಿದರು.

ಉಪನ್ಯಾಸದ ಬಳಿಕ ಬೆಂಗಳೂರಿನ ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್ ಇವರಿಂದ ಭಾರತೀಯ ಶಾಸ್ತ್ರೀಯ ನೃತ್ಯ “ಮಹಾರುದ್ರ” ಮತ್ತು ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್ ಅವರ ನೃತ್ಯ ನಿರ್ದೇಶನದಲ್ಲಿ, ಡಾ. ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ, ಶ್ರೀಮತಿ ಸುಧಾ ಆಡುಕಳ ಅವರ ರಚನೆಯಲ್ಲಿ, ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯ ರೂಪಕ – ನಾರಸಿಂಹ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.