ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಮಹಾಶಿವರಾತ್ರಿ ಮಹೋತ್ಸವ

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವು ಪ್ರಾತಃಕಾಲ 06:30 ಕ್ಕೆ ರುದ್ರಾಭಿಷೇಕ, ಪಂಚಾಮೃತ ವಿಶೇಷ ಸೇವೆಗಳೊಂದಿಗೆ ಪ್ರಾರಂಭಗೊಂಡಿತು. ಸಹಸ್ರಾರು ಭಕ್ತಾಭಿಮಾನಿಗಳು ಸನ್ನಿಧಾನಕ್ಕೆ ಆಗಮಿಸಿ, ದೇವರ ಪ್ರಾರ್ಥನೆಗೈದು, ಫೆಬ್ರವರಿ 22 ರಿಂದ ಮಾರ್ಚ್ 05 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಯಾಗ ದ್ರವ್ಯಗಳನ್ನು ಸಮರ್ಪಣೆಗೈದು, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಿಂದ ಉಮಾಮಹೇಶ್ವರ ಸನ್ನಿಧಾನಕ್ಕೆ ಆಗಮಿಸಿದ ಪುಂಗನೂರು ತಳಿಯ ಗೋವುಗಳನ್ನು, ಅತಿರುದ್ರ ಮಹಾಯಾಗದ ಯಾಗ ಮಂಟಪವನ್ನು, ಸಭಾ ವೇದಿಕೆ ಇತ್ಯಾದಿ ಸ್ಥಳಗಳನ್ನು ವೀಕ್ಷಿಸಿದರು.

ಫೆಬ್ರವರಿ 22, 2023 ರ ಬುಧವಾರದಂದು ಶುಭಾರಂಭಗೊಳ್ಳಲಿರುವ ಅತಿರುದ್ರ ಮಹಾಯಾಗ ದಿನದ ಪ್ರಾತಃಕಾಲ 06:30 ಕ್ಕೆ ಮಹಾಯಾಗದ ಸಂಕಲ್ಪ ನೆರವೇರಲಿದ್ದು ಮಧ್ಯಾಹ್ನ ಅನ್ನಸಂತರ್ಪಣೆಯೊಂದಿಗೆ, ಸಾಯಂಕಾಲ 05:30 ಕ್ಕೆ ಪ್ರಾರಂಭಗೊಳ್ಳಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕು. ಅಕ್ಷಯ ಗೋಖಲೆ ಅವರು ಉಪನ್ಯಾಸ ನೀಡಲಿರುವರು. ಮಧ್ಯಾಹ್ನ 12:00 ರಿಂದ ಸಾಯಂಕಾಲ 05:00 ರವರೆಗೆ ಭಜನಾ ತಂಡಗಳಿಂದ ಭಕ್ತಿ ಮಾಧುರ್ಯ ಮತ್ತು ಜಂಸಾಲೆ ರಾಘವೇಂದ್ರ ಆಚಾರ್ಯ ಅವರ ಸಾರಥ್ಯದಲ್ಲಿ “ಯಕ್ಷಗಾನ ವೈಭವ” ಜರುಗಲಿರುವುದು.