ದಕ್ಷಿಣ ಕನ್ನಡ ಹಾಗೂ ಕೊಡಗು ಗ್ರಂಥಪಾಲಕರ ಸಂಘ: ಆಳ್ವಾಸ್‌ನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ

ಮೂಡುಬಿದಿರೆ : ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗ್ರಂಥಪಾಲಕರ ಸಂಘ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ `ಗ್ರಂಥಾಲಯ ಸೇವೆಗಳ ನಾವಿನ್ಯತೆ ಹಾಗೂ ಪರಿಣಾಮಕಾರಿ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ’ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿವಿ ಕಾಲೇಜಿನ ಡಾ.ಮಾಧವ ಎಂ.ಕೆ ಮಾತನಾಡಿ, ಕಲಿಕೆಯ ದೇಗುಲವಾದ ಗ್ರಂಥಾಲಯದಲ್ಲಿ ಸಮಯ ಕಳೆಯುವವರು ನಿಜವಾದ ಸಾಧಕರು. ಓದುವ ಹವ್ಯಾಸ ಇರುವವರು ಎಂದಿಗೂ ಅಧೀರರಾಗುವುದಿಲ್ಲ. ಓದಿನಿಂದ ಮಾನಸಿಕ ಆರೋಗ್ಯ, ಏಕಾಗ್ರತೆ, ಒತ್ತಡಮುಕ್ತ ಜೀವನ ಸಾಧ್ಯವಾಗುವುದರ ಜೊತೆಗೆ ಜ್ಞಾನದ ಹಸಿವು, ಭಾವನಾತ್ಮಕ ಧೈರ್ಯ, ಸ್ಥೈರ್ಯ, ಕಲ್ಪನಾಶಕ್ತಿ ಮತ್ತು ಭಾಷಾಸಂಪತ್ತು ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳನ್ನು ಗ್ರಂಥಾಲಯದತ್ತ ಸೆಳೆಯುವ ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸುವುದು ಕಾಲದ ಅವಶ್ಯಕತೆ ಎಂದರು.

ಸಂಘದ ನ್ಯೂಸ್ ಬುಲೆಟಿನ್ ಅನ್ನು ಬಿಡುಗಡೆಗೊಳಿಸಲಾಯಿತು.

ಸಂಘದ ನಿವೃತ್ತ ಗ್ರಂಥಪಾಲಕ, ಬೇಸೆಂಟ್ ಕಾಲೇಜಿನ ಪ್ರೊ.ವಾಸಪ್ಪ ಗೌಡ, ಮಾಹೆಯ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಾಪಕ ಭೂಷಣಾ ಪ್ರಶಸ್ತಿ ವಿಜೇತರಾದ ಯಶೋಧಾ ಹಾಗೂ ವಿಜಯಲತಾ, ಶಿಕ್ಷಣಾ ಇಲಾಖೆಯಿಂದ ರಾಜ್ಯ ಮಟ್ಟದ ಅತ್ಯುತ್ತಮ ಗ್ರಂಥಪಾಲಕಿ ಪ್ರಶಸ್ತಿ ವಿಜೇತೆ ರಂಜಿತಾ ಸಿ., ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅದಿತಿ, ಪಿಎಚ್‌ಡಿ ಪದವಿ ಪಡೆದ ಡಾ ಪ್ರೇಮಾ, ಡಾ.ಲೋಕೇಶ್ ಹಾಗೂ ಡಾ.ಲೋಕನಾಥ್ ಅವರನ್ನು ಗೌರವಿಸಲಾಯಿತು.
ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಮೈಸೂರು ವಿವಿಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ.ಆದಿತ್ಯ ಕುಮಾರಿ ಎಚ್., ಆಳ್ವಾಸ್ ಕಾಲೇಜಿನ ಮುಖ್ಯ ಗ್ರಂಥಾಪಾಲಕಿ ಶ್ಯಾಮಲತಾ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷೆ ಡಾ.ರೇಖಾ ಡಿ.ಪೈ ಸ್ವಾಗತಿಸಿದರು. ಕರ‍್ಯದರ್ಶಿ ಡಾ ವನಜಾ ಬಿ ವಂದಿಸಿ, ಸದಸ್ಯೆ ಡಾ ಸುಜಾತಾ ನಿರೂಪಿಸಿದರು.
ಸಂಘದ 85ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡರು.

Related Posts

Leave a Reply

Your email address will not be published.