ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ: ಸಂಭ್ರಮದಿಂದ ನಡೆದ ದೇವರ ದರ್ಶನ ಬಲಿ ಉತ್ಸವ
ಸುಳ್ಯ: ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಇದೀಗ ವಾರ್ಷಿಕ ಜಾತ್ರೋತ್ಸವಕ್ಕೆ ಸಿದ್ಧಗೊಂಡಿದ್ದು ಗುರುವಾರ ಬೆಳಿಗ್ಗೆ ಕ್ಷೇತ್ರದಲ್ಲಿ ದರ್ಶನಬಲಿ ಉತ್ಸವ ನಡೆಯಿತು.
ದೇವರ ವಿಗ್ರಹ ಹೊತ್ತ ಪ್ರಸಾದ ಅಡಿಗರು ದರ್ಶನ ಬಲಿ ಉತ್ಸವದ ವಿಧಿ ವಿಧಾನಗಳನ್ನು ನೆರವೇರಿಸಿದರು.ದೇಗುಲದ ಪ್ರಧಾನ ಅರ್ಚಕ ಅನಂತಕೃಷ್ಣ ಪಾಂಗಣ್ಣಾಯ ಹಾಗೂ ಇತರ ಅರ್ಚಕರು ಸಹಕರಿಸಿದರು. ಕೊಂಬು, ವಾದ್ಯ, ಚೆಂಡೆ, ನಗಾರಿಗಳ ಸದ್ದು ಬಲಿ ಉತ್ಸವದ ಮೆರುಗನ್ನು ಹೆಚ್ಚಿಸಿದವು.
ವಾರ್ಷಕ ಜಾತ್ರೋತ್ಸವದ ಅಂಗವಾಗಿ ಬುಧವಾರ ರಾತ್ರಿ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಯಿಂದ ಭಂಡಾರ ತರಲಾಯಿತು ಅನ್ನಸಂತರ್ಪಣೆಯ ಬಳಿಕ ಭೂತಬಲಿ ಉತ್ಸವ, ಬಲಿಕಟ್ಟೆ ಪೂಜೆ, ವಸಂತೋತ್ಸವ, ಬೆಡಿ ಉತ್ಸವ ಹಾಗೂ ನೃತ್ಯ ಬಲಿ ಉತ್ಸವ ನಡೆಯಿತು.
ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪುಂಡರೀಕ ಹೆಬ್ಬಾರ್, ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಮಾಜಿ ಆಡಳಿತ ಮೊಕ್ತೇಸರ ಮಾವಜಿ ಮುದ್ದಪ್ಪ ಗೌಡ ಸೇರಿದಂತೆ ವಿವಿಧ ಉಪ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

















