ಉಚಿತ ಯೋಜನೆಗಳಿಂದ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ : ಪುತ್ತೂರಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಪುತ್ತೂರು: ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಖಾಸಗಿ ವಾಹನ ಚಾಲಕ-ಮಾಲಕರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಕಷ್ಟ-ನಷ್ಟ ಹಾಗೂ ಉಚಿತ ಯೋಜನೆಗಳಿಂದ ಆಹಾರ ವಸ್ತುಗಳಿಗೆ ಮತ್ತು ಇತರ ವಸ್ತುಗಳಿಗೆ ಬೆಲೆ ಏರಿಕೆಯಿಂದ ಜನ ಸಮಾನ್ಯರಿಗೆ ಉಂಟಾಗುವ ತೊಂದರೆಯನ್ನು ವಿರೋಧಿಸಿ ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟ ಅನುರಾಗ ವಠಾರ ಇದರ ಆಶ್ರಯದಲ್ಲಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ. ಪುರಂದರ ಭಟ್ ಮಾತನಾಡಿ, ಉಚಿತ ಗ್ಯಾರಂಟಿ ಯೋಜನೆಗಳಿಂದ ಸಾರ್ವತ್ರಿಕ ಅನ್ಯಾಯವಾಗಿದೆ. ತನ್ನ ಖಾಸಗಿ ಸಂಪಾದನೆಯಿಂದ ಇತರರಿಗೆ ನೀಡುವುದನ್ನು ಉಚಿತ ಎಂದು ಧರ್ಮ ಹೇಳುತ್ತಿದ್ದೆ. ಆದರೆ ಸರಕಾರ ಜನರ ತೆರಿಗೆಯ ಹಣದಿಂದ ನೀಡಿದರೆ ಅದು ಉಚಿತವಾಗಲು ಹೇಗೆ ಸಾಧ್ಯ. ಪಂಚಾಯತ್ನಿಂದ ಪಾರ್ಲಿಮೆಂಟ್ ತನಕ ಅರಿವಿಲ್ಲದವರಿಂದ ಇಂತಹ ಸ್ಥಿತ ಬಂದಿದೆ. 2022-23ನೇ ಸಾಲಿನ ಫಲಿತಾಂಶ ಇನ್ನೂ ಬಂದಿಲ್ಲ. ಹಾಗಾದರೆ ಇವರು ನೀಡುವುದಾರೂ ಯಾರಿಗೆ. ಈ ಉಚಿತ ಯೋಜನೆಗಳಿಂದ ಸಾಲ ತೀರಿಸಲಾಗದೇ ದೇಶ ಮತ್ತೆ ಪರರ ಕೈವಶವಾಗಲಿದೆ ಎಂದು ಹೇಳಿದರು.
ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಜಯರಾಮ ಕುಲಾಲ್ ಮಾತನಾಡಿ, ಸರಕಾರದ ಉಚಿತ ಯೋಜನೆಯಿಂದ ಬಡ ರಿಕ್ಷಾ ಚಾಲಕರು ಬೀದಿ ಬೀಳುವಂತಾಗಿದೆ. ಬೆಲೆ ಏರಿಕೆ ಮಾಡಿ ಉಚಿತ ಯೋಜನೆಗಳನ್ನು ನೀಡುತ್ತಿದ್ದಾರೆ. ಉಚಿತ ಯೋಜನೆಯಿಂದ ಸರಕಾರಕ್ಕೆ ಗಂಡಾಂತರ ಬರಲಿದೆ. ಉಚಿತ ಯೋಜನೆಯಿಂದ ಮುಂದೆ ಕೆಟ್ಟ ಪರಿಣಾಮ ಬೀಳಲಿದೆ. ಒಂದು ವರ್ಗಕ್ಕೆ ಉಚಿತ ಯೋಜನೆಗಳನ್ನು ನೀಡಿ ತಾರತಮ್ಯ ಮಾಡುವ ಬದಲು ರಿಯಾಯಿತಿ ದರದಲ್ಲಿ ನೀಡಬೇಕು ಎಂದರು.

ಕಾನೂನು ಸಲಹೆಗಾರ ದೇವಾನಂದ ಕೆ,ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಗಿರೀಶ್ ನಾಯ್ಕ,ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಸಲಹೆಗಾರ ಸೇಸಪ್ಪ ಕುಲಾಲ್, ಉಪಾಧ್ಯಕ್ಷ ಮೋಹನ ಆಚಾರ್ಯ, ಕರ್ನಾಟಕ ಆಟೋ ರಿಕ್ಷಾ ಚಾಲಕ ಮ್ಹಾಲಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಸಂಪ್ಯ, ನವ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ರಾಜೇಶ್ ಮುಕ್ವೆ, ಬಸ್ ಮ್ಹಾಲಕ ಶಿವಪ್ರಸಾದ್ ಕೌಡಿಚ್ಚಾರು, ವಿದ್ಯುತ್ ಕಂಬ ಅಳವಡಿಸುವವರ ಸಂಘದ ಸುಂದರ್,ಗಿರೀಶ್ ನಾಯ್ಕ ಸೊರಕೆ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
