ಉಡುಪಿ: ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ: ಸಂಗೀತ ಲೋಕದ ದಿಗ್ಗಜ ಡಾ. ವಿದ್ಯಾಭೂಷಣರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ
ಕೋಟದ ಕಾರಂತ ಥೀಮ್ ಪಾರ್ಕ್‍ನಲ್ಲಿ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಸಂಗೀತ ಲೋಕದ ದಿಗ್ಗಜ ಡಾ. ವಿದ್ಯಾಭೂಷಣರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಗಮಿಸಿದ್ದ ರಾಜ್ಯಪಾಲ ಥಾವರ್‍ಚಂದ್ ಗೇಹಲೋಟ್‍ರವರಿಗೆ ಕರಾವಳಿಯ ಗಂಡುಕಲೆ ಯಕ್ಷ ಕೀರಿಟ ಧರಿಸಿ ಗೌರವಿಸಲಾಯಿತು.
ರಾಜ್ಯಪಾಲ ಥಾವರ್‍ಚಂದ್ ಗೇಹಲೋಟ್ ಅವರು ಡಾ. ವಿದ್ಯಾಭೂಷಣರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು ಕಾರಂತರ ಸಾಹಿತ್ಯ, ಕಲೆ, ಸಂಸ್ಕೃತಿಯ ಅನಾವರಣ ಕಾರಂತ ಥೀಂ ಪಾರ್ಕ್ ಮೂಲಕ ಯುವ ಸಮೂಹವನ್ನು ತಲುಪುತ್ತಿದೆ ಎಂದರು.
ಇದೇ ಕಾರ್ಯಕ್ರಮದಲ್ಲಿ ಗಾಂಧಿ ಪುರಸ್ಕಾರ ಪಡೆದ ಗ್ರಾಮಪಂಚಾಯತ್ ಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮೊದಲು ಕಾರಂತ ಪುತ್ಥಳಿಗೆ ರಾಜ್ಯಪಾಲರು ಮಾಲಾರ್ಪಣೆಗೈದು, ಕಾರಂತ ಥೀಂ ಪಾರ್ಕ್‍ನಲ್ಲಿ ನಡೆಯುವ ವಿವಿಧ ಕಲಾ ಚಟುವಟಿಕೆಗಳನ್ನು ವೀಕ್ಷಿಸಿದರು. ಕಾರಂತ ಹುಟ್ಟೂರ ಪ್ರಶಸ್ತಿ ರೂವಾರಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು.