ಉಡುಪಿ: ಹತ್ಯೆ ಪ್ರಕರಣ: ಸ್ಥಳ ಮಹಜರು ವೇಳೆ ಲಾಠಿಚಾರ್ಜ್ ನಡೆದಿರುವುದು ವಿಷಾದನೀಯ: ಕೆ. ಉದಯಕುಮಾರ್
ನೇಜಾರಿನ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಕೊಂದ ಆರೋಪಿಯನ್ನು ಪೊಲಿಸರು ಸ್ಥಳ ಮಹಜರು ನಡೆಸಲು ಕರೆತಂದಾಗ ನೆರದ ಜನರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ವಿಷಾದನೀಯ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಕೊಲೆಗಡುಕ ಪ್ರವೀಣ್ ಅರುಣ್ ಚೌಗಲೆಯನ್ನು ಬಂಧಿಸಿರುವ ಪೊಲೀಸರು ಶ್ಲಾಘನೀಯಯರು.
ಸ್ಥಳ ಮಹಜರಿಗಾಗಿ ಆತನನ್ನು ಕರೆತರುವಾಗ ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಿತ್ತು. ಘಟನೆಯಿಂದ ದುಃಖಿತರು ಮತ್ತು ಆಕ್ರೋಶಗೊಂಡ ಮಂದಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಬೇಕಾದ ಪರಿಸ್ಥಿತಿ ಒದಗಿಬಂದಿರುವುದು ವಿಷಾದನೀಯ ಎಂದಿರುವ ಉದಯಕುಮಾರ್ ಶೆಟ್ಟಿ, ಜನತೆ ಶಾಂತಿ ಸಹನೆ ಕಾಪಾಡಿಕೊಂಡು ತನಿಖೆ ನಡೆಸಲು ಪೊಲೀಸರಿಗೆ ಅವಕಾಶ ನೀಡಿ, ಆರೋಪಿಗೆ ಕಠಿಣ ಶಿಕ್ಷೆಯಾಗುವಲ್ಲಿ ಸಹಕರಿಸಬೇಕಾಗಿ ವಿನಂತಿಸಿದ್ದಾರೆ.