ಉಳ್ಳಾಲ : ಚರ್ಚ್ ಪೂಜೆಗೆ ತೆರಳಿದವರು ವಾಪಸ್ಸು ಬರಲಿಲ್ಲ
ಉಳ್ಳಾಲ: ಬೆಂದೂರ್‍ವೆಲ್ ಖಾಸಗಿ ಬಸ್ ಚಾಲಕನ ಧಾವಂತಕ್ಕೆ ಬಲಿಯಾದ ತೊಕ್ಕೊಟ್ಟು ಸೇವಂತಿಗುಡ್ಡೆ ನಿವಾಸಿ ದಿ.ಆಂಟೋನಿ ಮೊಂತೇರೊ ಪತ್ನಿ ಐರೀನ್ (72) ಕೆಲ ವರ್ಷಗಳ ಹಿಂದೆ ಅಂಗನವಾಡಿ ಸಹಾಯಕಿಯಾಗಿ ನಿವೃತ್ತಿ ಹೊಂದಿದ್ದರು. ಎಂದಿನಂತೆ ಪ್ರತಿ ಗುರುವಾರ ಬಿಕರ್ನಕಟ್ಟೆ ಚರ್ಚಿನ ಪೂಜೆಗೆಂದು ತೆರಳಿದವರು ಇಂದು ವಾಪಸ್ಸಾಗಲಿಲ್ಲ ಅನ್ನುವ ನೋವನ್ನು ಮನೆಮಂದಿ ವ್ಯಕ್ತಪಡಿಸಿದ್ದಾರೆ.
ಸೇವಂತಿಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐರೀನ್ ಅವರು ಕೆಲ ವರ್ಷಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ನಂತರದ ದಿನಗಳಲ್ಲಿ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದರು. ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಜೊತೆಗೆ ಮನೆಯಲ್ಲಿದ್ದ ಐರೀನ್ ಹಿಂದಿನಿಂದಲೂ ಪ್ರತಿ ಗುರುವಾರ ಬಿಕರ್ನಕಟ್ಟೆ ಚರ್ಚಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ನೆರೆಮನೆಯವರೂ ಐರೀನ್ ಅವರ ಜೊತೆಗೆ ಹೋಗುತ್ತಿದ್ದವರು, ಇಂದು ಕಾರಣಾಂತರಗಳಿಂದ ಜೊತೆಗೆ ತೆರಳಿರಲಿಲ್ಲ. ಚರ್ಚಿಗೆ ಹೋಗುವಾಗಲೂ ನೆರೆಮನೆಯವರ ಜೊತೆಗೆ ಇಂದು ಬಸಳೆ ಮತ್ತು ಮರುವಾಯಿ ಪದಾರ್ಥ ಮಾಡಬೇಕು ಎಂದು ಹೇಳಿಹೋದವರು ವಾಪಸ್ಸು ಬರಲಿಲ್ಲ ಅನ್ನುವ ನೋವನ್ನು ವ್ಯಕ್ತಪಡಿಸಿದ್ದಾರೆ. ಪುತ್ರನೋರ್ವ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.