ಮೂಡುಬಿದರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ನಾಮಪತ್ರ ಸಲ್ಲಿಕೆ

ಮೂಡುಬಿದಿರೆ: ಮುಲ್ಕಿ – ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಎ. ಕೋಟ್ಯಾನ್ ಅವರು ಸಹಸ್ರಾರು ಸಂಖ್ಯೆಯ ಕೇಸರಿಪಡೆಯೊಂದಿಗೆ ಮೆರವಣಿಗೆಯಲ್ಲಿ ಆಡಳಿತ ಸೌಧಕ್ಕೆ ಆಗಮಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಕೋಟ್ಯಾನ್ ಅವರು ಕಳೆದ ಐದು ವರ್ಷಗಳಲ್ಲಿ ಎರಡು ವರ್ಷ ಕೊರೋನಾದಿಂದಾಗಿ ಸಮಸ್ಯೆಯಾಗಿತ್ತು. ಆದರೆ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತರುವ ಮೂಲಕ ಅಭಿವೃದ್ಧಿ ಪಡಿಸಲಾಗಿದೆ. ಆದರೆ ನೂರಕ್ಕೆ ನೂರು ಕನಸು ನನಸಾಗಿಲ್ಲ. ಇದೀಗ ಮತ್ತೊಮ್ಮೆ ಚುನಾವಣೆಗೆ ನಿಲ್ಲಲು ಅವಕಾಶ ಸಿಕ್ಕಿದ್ದು ಗೆಲ್ಲುವ ವಿಶ್ವಾಸವಿದೆ.
ಮುಂದಿನ ದಿನಗಳಲ್ಲಿ ತನ್ನ ಕ್ಷೇತ್ರಕ್ಕೆ ಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ಹಾಗೂ ಜನರಿಗೆ ಬೇಕಾದಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯತ್ನಿಸಲಾಗುವುದು ಈ ಮೂಲಕ ಮೂಲ್ಕಿ, ಮೂಡುಬಿದಿರೆ ತಾಲೂಕುಗಳನ್ನು ರಾಜ್ಯದಲ್ಲೇ ಮಾದರಿಯಾಗಿಸುವ ಇರಾದೆಯನ್ನು ಹೊಂದಿದ್ದೇನೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ಕಳೆದ 5 ವರ್ಷದಲ್ಲಿ ಉಮಾನಾಥ್ ಕೋಟ್ಯಾನ್‍ರವರು ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳು ರಾಷ್ಟ್ರವಾದಿ ಚಿಂತನೆ, ಹಿಂದುಪರ ಧ್ವನಿ ಪರಿಗಣಿಸಿ ಹೃದಯ ಸಿಂಹಾಸನದಲ್ಲಿ ಸ್ಥಾನ ನೀಡುವಂತೆ ಸಲಹೆಯಿತ್ತರು. ಕಳೆದ ಅವಧಿಯ ರೀತಿಯಲ್ಲಿ ಸಾವಿರಾರು ಮತಗಳಿಂದ ಮತ್ತೆ ಗೆಲುವು ದೊರಕಿಸಿಕೊಡುವಂತೆ ಕರೆಯಿತ್ತರು.

ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಪ್ರಮುಖರಾದ ಈಶ್ವರ ಕಟೀಲ್, ಮೇಘನಾದ ಶೆಟ್ಟಿ, ಕೃಷ್ಣರಾಜ ಹೆಗ್ಡೆ, ಕೆ.ಪಿ. ಜಗದೀಶ ಅಧಿಕಾರಿ, ಜೋಯ್ಲಸ್ ಡಿಸೋಜಾ, ಕೆ.ಆರ್. ಪಂಡಿತ್, ಉಮಾನಾಥ ಎಕ್ಕಾರ್, ಬಾಹುಬಲಿ ಪ್ರಸಾದ್ ಹಾಗೂ ಮಾಜಿ ಸಚಿವ ಕೃಷ್ಣ ಜೆ, ಪಾಲೇಮಾರ್ ಪಕ್ಷದ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬಂದರು.ನಾಮಪತ್ರ ಸಲ್ಲಿಸುವ ಮೊದಲು ಉಮಾನಾಥ ಕೋಟ್ಯಾನ್ ಅವರು ವೆಂಕಟರಮಣ ದೇವಸ್ಥಾನ ಮತ್ತು ಹನುಮಂತ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸುಮಾರು 5,000 ದಷ್ಟು ಪೇಟ ಧರಿಸಿದ ಕಾರ್ಯಕರ್ತರು, ಹಾಗೂ 10,000 ದಷ್ಟು ಪಕ್ಷದ ಧ್ವಜವನ್ನು ಹಿಡಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬಂದರು.

Related Posts

Leave a Reply

Your email address will not be published.