ಪಡುಬಿದ್ರಿ: ಯುಪಿಸಿಎಲ್‌ನಿಂದ ಕೇರಳಕ್ಕೆ ವಿದ್ಯುತ್ ಸರಬರಾಜು, ಗ್ರಾಮಸ್ಥರ ವಿರೋಧ
ಪಡುಬಿದ್ರಿ ಸಮೀಪದ ಯುಪಿಸಿಎಲ್ ಕಂಪನಿಯಿಂದ ಕೇರಳಕ್ಕೆ ವಿದ್ಯುತ್ ಸರಬರಾಜು ನಡೆಸಲು ಟವರ್ ನಿರ್ಮಾಣಕ್ಕೆ ಜಿಲ್ಲಾಡಳಿತದ ನಿರ್ದೇಶನದಂತೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಆಗಮಿಸಿದ ಅಧಿಕಾರಿಗಳ ತಂಡವನ್ನು ಗ್ರಾಮಸ್ಥರು ವಾಪಾಸು ಕಳುಹಿಸಿದ ಘಟನೆ ಇನ್ನಾ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಮಾತನಾಡಿದ ಇನ್ನಾ ಗ್ರಾ.ಪಂ.ಸದಸ್ಯ ದೀಪಕ್ ಕೋಟ್ಯಾನ್, ಜನರ ವಿರೋಧದ ನಡುವೆಯೂ ಜನರಿಗೆ ಯಾವುದೇ ಮಾಹಿತಿ ನೀಡದೆ ಇನ್ನಾ ಪ್ರೌಢಶಾಲಾ ಬಳಿ ಯುಪಿಸಿಎಲ್ ನಿಂದ ಕೇರಳಕ್ಕೆ ವಿದ್ಯುತ್ ಸಾಗಿಸಲು ಟವರ್ ನಿರ್ಮಾಣಕ್ಕೆ ಗ್ರಾಮಸ್ಥರಾದ ನಾವು ಬಹಳಷ್ಟು ವಿರೋಧ ವ್ಯಕ್ತ ಪಡಿಸಿದರೂ, ಮತ್ತೆ ಪೊಲೀಸ್ ರಕ್ಷಣೆಯೊಂದಿಗೆ ತಹಶಿಲ್ದಾರ್ ಸಹಿತ ಟವರ್ ನಿರ್ಮಾಣ ಗುತ್ತಿಗೆ ಕಂಪನಿ ಅಧಿಕಾರಿಗಳು ಆಗಮಿಸಿ ಕಾಮಗಾರಿಗೆ ಮುಂದಾಗುತ್ತಿದಂತೆ ಸೇರಿದ ಗ್ರಾಮಸ್ಥರು ನಮಗೆ ಯಾವುದೇ ಮಾಹಿತಿ ನೀಡದೆ ಕಾಮಗಾರಿ ನಡೆಸಲು ನಾವು ಅವಕಾಶ ನೀಡುವುದಿಲ್ಲ ಎಂಬುದಾಗಿ ಪಟ್ಟು ಹಿಡಿದರು. ಈ ಹಿನ್ನಲೆಯಲ್ಲಿ ನಾಳೆಯ ದಿನವೇ ಪೂರಕ ಮಾಹಿತಿಯನ್ನು ಗ್ರಾಮ ಪಂಚಾಯತಿಯಲ್ಲಿ ಒದಗಿಸಿ ಬಳಿಕ ಕಾಮಗಾರಿ ನಡೆಸಲಾಗುವುದು ಎಂಬುದಾಗಿ ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ.
ಯಾವುದೇ ಕಾರಣಕ್ಕೆ ಗ್ರಾಮಸ್ಥರಾದ ನಮ್ಮನ್ನು ಕತ್ತಲ್ಲಿಟ್ಟು ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂಬುದಾಗಿ ಕೋಟ್ಯಾನ್ ತಿಳಿಸಿದ್ದಾರೆ.
ಕಾರ್ಕಳ ತಹಶಿಲ್ದಾರ್ ನರ್ಸಪ್ಪರವರು ಮಾತನಾಡಿ, ಬಹುತೇಕ ಸಂತ್ರಸ್ತರಿಗೆ ಈ ಬಗ್ಗೆ ಯಾವುದೇ ನೋಟಿಸ್ ರವಾನೆಯಾಗಿಲ್ಲ ಎಂಬುದಾಗಿ ತಿಳಿಸಿದ ಮೇರೆಗೆ ನಾಳೆಯ ದಿನವೇ ಗ್ರಾ.ಪಂ. ಅಧಿಕಾರಿಗಳ ಮೂಲಕ ಪೂರಕ ಮಾಹಿತಿ ದಾಖಲೆಗಳನ್ನು ಒದಗಿಸಲಾಗುವುದು, ಬಳಿಕ ಮೇಲಾಧಿಕಾರಿಗಳ ಸೂಚನೆಯಂತೆ ಕಾಮಗಾರಿ ಎಂದರು. ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಹಾಗೂ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಈ ಸಂದರ್ಭ ಪ್ರಮುಖರಾದ ಅಮರನಾಥ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಜಯ ಎಸ್.ಕೋಟ್ಯಾನ್, ಮಹೇಶ್, ಚಂದ್ರಹಾಸ್ ಶೆಟ್ಟಿ, ಕುಶ ಆರ್.ಮೂಲ್ಯ ಪ್ರಶಾಂತ್, ಸಂತೋಷ್, ಜಯಂತ್ ಶೆಟ್ಟಿ, ಫೆಲಿಕ್ಸ್ ಡಿಸೋಜ ಮುಂತಾದವರಿದ್ದರು.