ನೀರುಗೋರಿ ಮತ್ತು ನೀರಲ್ಲಿ ನಗರ ಗೋರಿ || V4NEWS

ಹಳೆಯಂಗಡಿ ಬಳಿ ನದಿಯಲ್ಲಿ ವಿದ್ಯಾರ್ಥಿಗಳ ಶವ. ಪಣಂಬೂರು ಬೀಚ್‍ನಲ್ಲಿ ಕಡಲಿಗೆ ಕಂತಿನಲ್ಲಿ ಆಹಾರವಾದವರ ಸುದ್ದಿ. ಇವೆಲ್ಲ ಉಪ್ಪು ನೀರಿಗೆ ಬಲಿಯಾದವರ ಸುದ್ದಿ. ಜಗತ್ತಿನ 71 ಶೇಕಡಾ ಪ್ರದೇಶವನ್ನು ಕಡಲು, ಮಹಾಕಡಲುಗಳು ಆವರಿಸಿಕೊಂಡಿವೆ. ಇದರಲ್ಲಿ ಜಗತ್ತಿನ 97.2 ಶೇಕಡಾ ನೀರು ಇದೆ. ಇದೆಲ್ಲ ಉಪ್ಪು ನೀರು. ಅಷ್ಟೇ ಅಲ್ಲ ಮಳೆಗಾಲ ಮುಗಿದ ಬಳಿಕ ಬೇಗನೆ ಉಬ್ಬರದ ಕಾರಣಕ್ಕೆ ಕಡಲ ನೀರು ನದಿಗೆ ನುಗ್ಗುತ್ತವೆ. ಹಾಗಾಗಿ ಕಡಲ ಕಡೆಯಿಂದ ನದಿಯಲ್ಲು ಕೆಲವು ಕಿಮೀವರೆಗೆ ಉಪ್ಪು ನೀರೇ ಇರುತ್ತದೆ. ಇದನ್ನು ತಡೆಯಲು ನೀರಿನ ಮಟ್ಟದ ಸಣ್ಣ ಅಣೆಕಟ್ಟುಗಳನ್ನು ಸಾಕಷ್ಟು ಕಡೆ ಕಟ್ಟಲಾಗಿದೆ. ಅಮೆಜಾನ್ ನದಿ ಅಗಾಧವಾಗಿದ್ದು ಕಡಲ ನೀರನ್ನೇ ಒಂದಷ್ಟು ದೂರ ಕುಡಿಯುವ ನೀರಾಗಿಸುವ ಸಾಮಥ್ರ್ಯ ಹೊಂದಿದೆ.
ಕೆರೆಯಲ್ಲಿ, ತೊರೆಯಲ್ಲಿ, ನದಿಯಲ್ಲಿ, ಕಡಲಲ್ಲಿ ನೀರು ಹರಿಯುತ್ತದೆ ಇಲ್ಲವೇ ತುಂಬಿರುತ್ತದೆ. ಈಗ ಅಲ್ಲೆಲ್ಲ ಹೆಣ ತೇಲುವುದರ ವರದಿಯೇ ಅಧಿಕವಾಗಿ ಬರುತ್ತಿವೆ. ಹೆಚ್ಚಿನ ಧರ್ಮಗಳು ಮಹಾ ಪ್ರಳಯದ ಕತೆ ಹೇಳುತ್ತಿವೆ. ಮಹಾ ಪ್ರಳಯದಲ್ಲಿ ದೇವರು ದೇವದೂತರೂ ಕೆಲವರನ್ನು ರಕ್ಷಿಸುವುದಾಗಿಯೂ ಕತೆಗಳಿವೆ. ಆದರೆ ಇತ್ತೀಚೆಗೆ ಕುಡಿಯಲು ನೀರಿಲ್ಲದಿದ್ದರೂ ಸಾಯಲು ಸಾಕಷ್ಟು ನೀರು ಇರುವುದು ವರದಿಯಾಗುತ್ತಲೇ ಇದೆ.
ಇದರಲ್ಲಿ ಎರಡು ವಿಧಾನವಿದೆ. ಒಂದು ಜನರು ನೀರಿನಲ್ಲಿ ಮುಕ್ತಿ ಕಾಣುವುದು. ಎರಡು ನೀರಿನ ಆಳ ಅಗಲ ತಿಳಿಯದೆ ನೀರಿಗೆ ಆಹಾರವಾಗುವುದು. ಬಾಲ ರಾಮನ ಆಲಯವಾದ ಅಯೋಧ್ಯೆಯಲ್ಲೇ ಸರಯೂ ನದಿಯಲ್ಲಿ ಮುಳುಗಿ ರಾಮನು ಕೊನೆಯುಸಿರು ಎಳೆಯುತ್ತಾನೆ. ರಾಮಾಯಣದ ಹಲವರ ಕೊನೆ ಸರಯೂ ನದಿಯಲ್ಲಿ ಆಗುತ್ತದೆ. ಕನ್ನಡದಲ್ಲಿ ಕೆರೆಗೆ ಹಾರದ ಜನಪದಗಳು ಇವೆ. ಮೂಢನಂಬಿಕೆಯಿಂದ ಜನರನ್ನು ಕೆರೆಗೆ ಬಲಿ ಕೊಡುತ್ತಿದ್ದುದಕ್ಕೂ ಸಾಕಷ್ಟು ಕತೆಗಳಿವೆ.
ಬೆಂಗಳೂರಿನಲ್ಲಿ ಒಂದನೆಯ ಕೆಂಪೇಗೌಡರ ಸೊಸೆ ಎರಡನೆಯ ಕೆಂಪೇಗೌಡರ ಹೆಂಡತಿ ಕೋರಮಂಗಲದ ಲಕ್ಷ್ಮಿಯನ್ನು ಕೆರೆಗೆ ಬಲಿ ಕೊಟ್ಟರೆಂದು ಕತೆಯಿದೆ. ಲಕ್ಷ್ಮಿಯೇ ಜನರ ಹಿತಕ್ಕಾಗಿ ಕೆರೆಗೆ ತನ್ನನ್ನು ಬಲಿ ಕೊಟ್ಟುಕೊಂಡಳೆಂದು ಕತೆಯ ಇನ್ನೊಂದು ಮಗ್ಗುಲು ಹೇಳುತ್ತದೆ. ಅದು ಸರಿ ಕೆರೆಗೆ ಬಲಿ ಹೋಗಲು ಗಂಡಸರು ಯಾರೂ ಇರಲಿಲ್ಲವೆ? ಈ ಲಕ್ಷ್ಮಿಗೆ ಒಂದು ವೀರಗಲ್ಲು ಇಲ್ಲವೇ ಸತಿ ಕಲ್ಲು ಇದೆ. ಅದಕ್ಕೆ ಯಾರೋ ಚಿಕ್ಕ ಗುಡಿ ಕಟ್ಟಿದ್ದರು. ಅದನ್ನು ದಶಕದ ಹಿಂದೆ ಇನ್ನೂ ದೊಡ್ಡದು ಮಾಡುವಾಗ ಲಕ್ಷ್ಮಿಯ ಮೂಲ ವೀರಗಲ್ಲು 90 ಶೇಕಡಾ ಮಣ್ಣಡಿಗೆ ಸೇರಿದೆ.
ನೀರು ಎಂಬುದು ಬಣ್ಣವಿಲ್ಲದ, ವಾಸನೆಯಿಲ್ಲದ, ಆಕಾರವಿಲ್ಲದ ಎಚ್2ಓ ದ್ರವ. ಎಂದರೆ ಎರಡು ಜಲಜನಕದ ಅಣು ಮತ್ತು ಒಂದು ಆಮ್ಲಜನಕದ ಅಣು ಸೇರಿದರೆ ನೀರು ಆಗುತ್ತದೆ. ನೆಲದಲ್ಲಿ ಅದಕ್ಕೆ ಲವಣಗಳು ಸೇರಿ ಅದಕ್ಕೆ ಕೆಲವು ರುಚಿ ಸೇರುತ್ತದೆ. ಪರ್ವತದ ಮೇಲೆ ವಾಸಿಸುವವರು ಗಳಗಂಡ ಕಾಯಿಲೆಗೆ ಒಳಗಾಗುವುದು ಹೆಚ್ಚು. ಅದಕ್ಕೆ ಕಾರಣ ಅಯೋಡಿನ್ ಕೊರತೆ. ಪರ್ವತದಿಂದ ನೀರು ಕೆಳಗೆ ಹರಿಯುವಾಗ ಅಲ್ಲಿನ ಲವಣ ಕೊಚ್ಚಿಕೊಂಡು ಹೋಗುತ್ತದೆ. ಹಾಗಾಗಿ ಅಲ್ಲಿನ ನೀರಿನಲ್ಲಿ ಅಯೋಡಿನ್ ಇಲ್ಲದೆ ಅಲ್ಲಿನ ಜನರು ಹೆಚ್ಚಾಗಿ ಗಳಗಂಡಕ್ಕೆ ಒಳಗಾಗುತ್ತಾರೆ.
ಕೋಲಾರ, ಚಿತ್ರದುರ್ಗ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ ಫ್ಲೋರೈಡ್‍ಯುಕ್ತ ನೀರಿನ ಸಮಸ್ಯೆ ಇದೆ. ಇದು ಹಲ್ಲು, ಎಲುಬುಗಳಿಗೆ ತೊಂದರೆಯುಂಟು ಮಾಡುತ್ತದೆ. ಹೀಗೆ ಕೆಲವೆಡೆ ನಾನಾ ಮಾಲಿನ್ಯದ ನೀರಿನ ಸಮಸ್ಯೆ ಸಹ ಹಲವು ಕಡೆ ಕಂಡು ಬರುತ್ತದೆ. ಇತ್ತೀಚೆಗೆ ಮಂಗಳೂರಿನ ಬೋಳೂರಿನಲ್ಲೇ ಮಹಾನಗರ ಪಾಲಿಕೆಯ ಕೊಳಾಯಿಯಲ್ಲಿ ಗಲೀಜು ನೀರು ಬಂದದ್ದು ಕೆಲವು ಕಡೆ ವರದಿಯಾಗಿತ್ತು. ಬೆಳಗಾವಿ ಜಿಲ್ಲೆಯ ಕೆಲವೆಡೆ ನೀರು ಇಲ್ಲದೆ ಈಗಲೇ ಬಗ್ಗಡ ಸೋಸಿಕೊಳ್ಳುವುದು ವರದಿಯಾಗಿದೆ. ಮಾರ್ಚ್ ಆರಂಭಕ್ಕೇ ಹೀಗಾದರೆ ಮೇ ಕತೆ ಇನ್ನು ಹೇಗೆ?
ಇತ್ತೀಚೆಗೆ ಹೆಚ್ಚು ನೀರು ಗೋರಿ ಸಾವುಗಳು ವರದಿಯಾಗುತ್ತಿರುವುದು ಉಪ್ಪು ನೀರಿನಲ್ಲಿ. ಪಣಂಬೂರು ಮತ್ತು ಮಲ್ಪೆ ಬೀಚುಗಳ ಬಳಿ ಹೊರಳುವ ತೆರೆಗಳು ಜನರನ್ನು ಸುತ್ತಿಕೊಂಡು ಕಡಲ ಒಳಕ್ಕೆ ಒಯ್ದು ಸಾಯಿಸಿ ಬಿಡುತ್ತವೆ. ಆಮೇಲೆ ಹೆಣ ಒಯ್ಯಲಿ ಎಂದು ದಡಕ್ಕೆ ಬಿಸುಟು ಬಿಡುತ್ತವೆ. ಅದು ಸರಿ ಕಡಲ ತೆರೆÀಗಳು ಎಂದರೆ ಏನು. ಕಡಲು ವಿಸ್ತಾರಕ್ಕೆ ತೆರೆದುಕೊಂಡಿರುವುದರಿಂದ ಅಲ್ಲಿ ಗಾಳಿ ಬೀಸುತ್ತಲೇ ಇರುತ್ತದೆ. ಆ ಗಾಳಿ ಬೀಸುಗೆಯು ತೆರೆಯ ಅಲೆಯನ್ನು ಎಬ್ಬಿಸುತ್ತವೆ. ಅವು ರುದ್ರ ರಮಣೀಯ. ಸರ್ಫಿಂಗ್ ಮಾದರಿಯ ಆಟಕ್ಕೂ ಒದಗುತ್ತವೆ. ಭಾರೀ ಅಲೆಯಾದಾಗ ಬೋಟುಗಳನ್ನು ಮುಳುಗಿಸುತ್ತವೆ. ಈಜು ಅರಿಯದೆ ಈಜು ಸಾಹಸ ಮಾಡುವವರನ್ನು ನೀರು ಗೋರಿ ಮಾಡುತ್ತವೆ. ಕಡಲ ಭರ್ಜರಿ ಅಲೆಗಳು ಈಜು ಬರುವವರನ್ನೂ ಯಮ ಸದನಕ್ಕೆ ಅಟ್ಟಿದ್ದಿದೆ.
ಜಗತ್ತಿನ ನೀರಿನಲ್ಲಿ 2.8 ಶೇಕಡಾ ಮಾತ್ರ ಕುಡಿಯಲು ಅರ್ಹವಾದ ನೀರು. ಆದರೆ ಅದೂ ಎಲ್ಲ ಕುಡಿಯಲು ಸಿಗುವುದಿಲ್ಲ. ಅದರಲ್ಲಿ ಕಾಲು ಭಾಗ ಎರಡೂ ಧ್ರುವಗಳಲ್ಲಿ ಮಂಜುಗಡ್ಡೆಯಾಗಿ ಮಂಜು ಗುಡ್ಡೆಯಾಗಿವೆ. ಭೂಬಿಸಿ ಹೀಗೆಯೇ ಏರಿದರೆ ಅವೆಲ್ಲ ಕರಗಿ ಕಡಲ ಉಪ್ಪು ನೀರಿಗೆ ಸೇರುತ್ತದೆ. ನಮ್ಮ ಭೂಮಂಡಲದ ಕರಾವಳಿಯ ನಗರಗಳನ್ನೆಲ್ಲ ಸರ್ವೆ ಮಾಡಿ ಬಹಳಷ್ಟನ್ನು ಆಪೋಶನ ತೆಗೆದುಕೊಂಡು ಒಂದಷ್ಟು ಉಳಿಸಲಿದೆ. ಅಂದರೆ ನೀರು ಜನರ ಜೀವಗಳನ್ನು ಮಾತ್ರ ತೆಗೆಯುತ್ತಿಲ್ಲ. ಪಟ್ಟಣಗಳನ್ನೂ ಗಲ್ಲಿಗೇರಿಸಲು ಕಾದು ಕೂತಿವೆ.
ಹಿಂದೆಯೇ ಅಲೆಗ್ಸಾಂಡ್ರಿಯಾ, ಕ್ರೀಕ್, ಅನ್‍ಪ್ಲಾಶ್, ಯಾನಮ್, ಪುರ್ನಾ, ವಿಲೊನೋವೊ ದೆಸಿ, ಪೂಂಪುಹಾರ್, ದ್ವಾರಕ ಮೊದಲಾದ ನಗರಗಳು ಕಡಲಿಗೆ ಆಹಾರವಾಗಿವೆ. ಭೂಬಿಸಿಗೆ ಧ್ರುವಗಳು ಕರಗಿ ಕಡಲ ನೀರಿನ ಮಟ್ಟ ಏರಿದರೆ. ಜಗತ್ತಿನ 36 ನಗರಗಳು ಬಹುತೇಕ ಮುಳುಗಲಿವೆ ಎಂದು ತಿಳಿದು ಬಂದಿದೆ. ನಮ್ಮ ಜೀವ ಎನ್ನುವುದು ಮುಖ್ಯವಾಗಿ ಉಸಿರಾಟ ಮತ್ತು ಎದೆ ಬಡಿತವನ್ನು ಅವಲಂಬಿಸಿದೆ. ನೀರಿನ ಒಳಗೆ ಕರಗಿರುವ ಆಮ್ಲಜನಕ ತೀರಾ ಕಡಿಮೆ ಇರುವುದರಿಂದ ಮತ್ತು ನಮಗೆ ಕಿವಿರು ಮಾದರಿಯ ವ್ಯವಸ್ಥೆ ಇಲ್ಲದಿರುವುದರಿಂದ ನಾವು ನೀರಿನೊಳಗೆ ಉಸಿರಾಡುವುದು ಸಾಧ್ಯವಿಲ್ಲ. ಹಾಗಾಗಿ ಸದಾ ದುಡಿಯುವ ಉಸಿರಾಟ ಮತ್ತು ಎದೆ ಬಡಿತಕ್ಕೆ ವಿಶ್ರಾಂತಿ ದೊರೆಯುತ್ತದೆ. ಹಾಗೆಂದರೆ ಅದು ಸಾವು.
ಕಡಲಿನ ತಿಮಿಂಗಿಲ, ಕಡಲ ದನ, ನದಿಯ ನೀರಾನೆ ಮೊದಲಾದ ಜೀವಿಗಳು ಸಸ್ತನಿಗಳು. ಇವು ಕಡಲಿನಲ್ಲಿ ನೀರಿನಲ್ಲಿ ನಮಗಿಂತ ಹೆಚ್ಚು ಕಾಲ ಇದ್ದು, ಕೊನೆಗೆ ಮೂಗಿನ ಭಾಗವನ್ನು ಮಾತ್ರ ಮೇಲೆ ಹಾಕಿ ಉಸಿರಾಡಬಲ್ಲವು. ನಾವು ಕೂಡ ನೀರೊಳಗೆ ಒಂದಷ್ಟು ಕಾಲ ಇದ್ದು, ಮೇಲೆ ಬಂದು ಉಸಿರೆಳೆದುಕೊಳ್ಳಬಲ್ಲೆವು. ಹಿಂದೆ ಮುತ್ತು ಹುಡುಕುವವರು ನೀರೊಳಗೆ ಹೆಚ್ಚು ಹೊತ್ತು ಇರಬಲ್ಲವರಾಗಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ನೀರು ನಮ್ಮನ್ನು ಗೋರಿ ಮಾಡಿಕೊಂಡರೂ ಆ ಶವಗಳನ್ನು ನೆಲಕ್ಕೆ ತಂದು ಗೋರಿ ಮಾಡದಿದ್ದರೆ ನಮ್ಮ ಜನರಿಗೆ ಮತ್ತು ಧರ್ಮಕ್ಕೆ ಸಮಾಧಾನ ಇಲ್ಲ. ಎಲ್ಲವೂ ನಿಸರ್ಗದ ವ್ಯವಹಾರ ಮತ್ತು ನಿಸರ್ಗ ಅವಲಂಬಿತ ಜೀವಿಗಳ ಅವ್ಯವಹಾರ. ನೀರು ನಗರ ನುಂಗಿದಾಗ ನಗರದ ಗೋರಿಯೂ ನೀರೊಳಗಾದೀತು.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.