ಯಕ್ಷ ಧ್ರುವ ಪಟ್ಲ 20 ಲಕ್ಷ ಅಂಚೆ ಅಪಘಾತ ವಿಮಾ ಪರಿಹಾರ ವಿತರಣೆ

ಕಳೆದ ಮೂರು ವರ್ಷಗಳಿಂದ ಪಟ್ಲ ಶ್ರೀ ಸತೀಶ್ ಶೆಟ್ಟಿ ನೇತೃತ್ವದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ, ರಂಗಭೂಮಿ, ದೈವಾರಾಧನೆ ಮತ್ತು ಕಂಬಳ ಕ್ಷೇತ್ರದ ಸಾವಿರಾರು ಕಲಾವಿದರಿಗೆ ಮಂಗಳೂರು ಅಂಚೆ ವಿಭಾಗದ ಸಹಯೋಗದಲ್ಲಿ ಉಚಿತವಾಗಿ ಅಪಘಾತ ವಿಮಾ ಸುರಕ್ಷೆಯನ್ನು ಪ್ರಾಯೋಜಿಸುತ್ತಿದ್ದು ಇತ್ತೀಚೆಗೆ ಅಪಘಾತಕ್ಕೊಳಗಾಗಿ ನಿಧನರಾದ ಯಕ್ಷಗಾನ ಕಲಾವಿದರಾದ ಆನಂದ ಮತ್ತು ಪ್ರವೀತ್ ಅವರ ಕುಟುಂಬಗಳಿಗೆ ತಲಾ ರೂ.ಹತ್ತು ಲಕ್ಷದ ವಿಮಾ ಪರಿಹಾರವನ್ನು ವಿತರಣೆ ಮಾಡಲಾಯಿತು.
ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಬಲ್ಮಠ ಇಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪರಿಹಾರ ಮೊತ್ತದ ಚೆಕ್ ನ್ನು ವಿತರಿಸಿದರು. ಪಟ್ಲ ಫೌಂಡೇಶನ್ ಮೂಲಕ ಎಲ್ಲಾ ಕ್ಷೇತ್ರದ ಕಲಾವಿದರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಿಂದ ಬಹಳಷ್ಟು ಕಲಾವಿದರಿಗೆ ಮತ್ತು ಕುಟುಂಬದವರಿಗೆ ಪ್ರಯೋಜನವಾಗಿದೆ. ಇದು ತನ್ನೊಬ್ಬನಿಂದ ಸಾಧ್ಯವಾದುದಲ್ಲ. ಇದರ ಹಿಂದೆ ಫೌಂಡೇಶನ್ ನ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರ ಶ್ರಮವಿದೆ. ಕಳೆದ ಮೂರು ವರ್ಷಗಳಿಂದ ಅಪಘಾತ ವಿಮೆಯನ್ನು ಅತ್ಯಂತ ಶ್ರದ್ಧೆ ಮತ್ತು ಶಿಸ್ತಿನಿಂದ ಮಾಡಿಸುವುದಷ್ಟೇ ಅಲ್ಲ ಕ್ಲೇಮ್ ಗಳು ಬಂದಾಗ ಅದರ ತ್ವರಿತ ವಿಲೇವಾರಿಗೂ ಶ್ರಮಿಸುತ್ತಿರುವ ಅಂಚೆ ಇಲಾಖೆಯ ಸಿಬಂದಿಗಳನ್ನು ಅವರು ಈ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆಯವರು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮತ್ತು ಮಂಗಳೂರು ಅಂಚೆ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ಜನತೆ ಅಂಚೆ ಇಲಾಖೆಯಲ್ಲಿರುವ ಸಕಲ ಸೌಲಭ್ಯಗಳ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರಾದ ಸುಧಾಕರ್ ಮಲ್ಯ ವಹಿಸಿದ್ದು ಅಂಚೆ ಸೇವೆಯನ್ನು ಜನಸೇವೆಯಾಗಿ ಪರಿವರ್ತಿಸುವಲ್ಲಿ ಸಹಕಾರ ನೀಡುತ್ತಿರುವ ಪಟ್ಲ ಫೌಂಡೇಶನ್ ಮತ್ತು ಪ್ರೆಸ್ ಕ್ಲಬ್ ಮಂಗಳೂರು ಇವರನ್ನು ಅಭಿನಂದಿಸಿದರು.
ಪಟ್ಲ ಫೌಂಡೇಶನ್ ನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿ ಎ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಐ ಪಿ ಪಿ ಬಿ ರೀಜನಲ್ ಮ್ಯಾನೇಜರ್ ಶ್ರೀನಿವಾಸ ಹೊಸಮನಿ, ಉಪ ಅಂಚೆ ಅಧೀಕ್ಷಕ ದಿನೇಶ್ ಪಿ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರೀಯ ವಿದ್ಯಾಲಯಗಳ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಅನೇಕ ಪದಕಗಳ ಸಾಧನೆ ಮಾಡಿದ ಅಂಚೆ ಅಧೀಕ್ಷಕರ ಕಚೇರಿ ಸಿಬ್ಬಂದಿ ಅಶ್ವಿನಿ ಮತ್ತು ಅಭಿಜಿತ್ ನಾಯ್ಕ್ ಅವರ ಸುಪುತ್ರ ತನಯ ಅವರನ್ನು ಹಾಗೂ ಅಂಚೆ ಉಳಿತಾಯ ಖಾತೆಗಳಲ್ಲಿ ಗಣನೀಯ ಸಾಧನೆಮಾಡಿದ ಅಂಚೆ ಸಿಬ್ಬಂದಿಗಳನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಐಪಿಪಿಬಿಯ ಸುಬ್ರಮಣ್ಯಂ, ಸಿಹಾಸ್, ಆದಿತ್ಯ ಬಿರ್ಲಾದ ರಮೇಶ್ ಅನಂತುಲಾ, ರಿಲಯೆನ್ಸ್ ನ ನಟರಾಜ್, ಅಂಚೆ ನಿರೀಕ್ಷಕರಾದ ಪ್ರದೀಪ್ ಭಂಡಾರಿ, ಸುಪ್ರಿಯಾ ಮೊದಲಾದವರು ಉಪಸ್ಥಿತರಿದ್ದರು. ಉಪ ಅಧೀಕ್ಷಕ ದಿನೇಶ್ ಪಿ ಸ್ವಾಗತಿಸಿ ಸುಭಾಷ್ ಸಾಲಿಯಾನ್ ರವರು ವಂದಿಸಿದರು. ಕಾರ್ಯಕ್ರಮವನ್ನು ದಯಾನಂದ ಪಿ ಕತ್ತಲಸಾರ್ ನಿರೂಪಿಸಿದರು.