ಉದ್ಘಾಟನೆಗೆ ಮುನ್ನವೇ ಕುಸಿಯುವ ಭೀತಿಯಲ್ಲಿ ಅವರಾಲು-ಮುಲ್ಕಿ ಸೇತುವೆ
ಗಾಂಧಿ ಪಥ ಗ್ರಾಮ ಪಥ (ನಮ್ಮ ಗ್ರಾಮ ನಮ್ಮ ರಸ್ತೆ) ಯೋಜನೆಯಡಿಯಲ್ಲಿ ಕಾಪು ತಾಲೂಕಿನ ಪಲಿಮಾರು ಅವರಾಲು ಮಟ್ಟುವಿನಿಂದ ಮುಲ್ಕಿಗೆ ಸಂಪರ್ಕ ಹೊಂದಿರುವ ಸೇತುವೆಯಲ್ಲಿ ಉದ್ಘಾಟನೆಗೆ ಮುನ್ನವೇ ಬಿರುಕು ಕಾಣಿಸಿದ್ದು, ಬಾಲಗ್ರಹ ಪೀಡೆಗೆ ಒಳಗಾಗಿದೆ.
ಈ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ಸ್ಥಳೀಯ ಪಲಿಮಾರು ಗ್ರಾ.ಪಂ. ಸದಸ್ಯ ಶಿವರಾಮ್ ಎಂಬವರು, ಜನರ ಬಲು ಬೇಡಿಕೆಯ ಸೇತುವೆ ಇದಾಗಿದ್ದು, ಇದರ ಉಸ್ತುವಾರಿಯನ್ನು ಪಂಚಾಯತ್ ರಾಜ್ಯ ಇಂಜಿನಿಯರ್ ಇಲಾಖೆ, ಉಡುಪಿ. ವಹಿಸಿಕೊಂಡಿತ್ತು, 2018ರ ಆರಂಭದಲ್ಲಿ ಆರಂಭಗೊಂಡಿದ್ದು, ಹನ್ನೊಂದು ತಿಂಗಳಲ್ಲಿ ಮುಗಿಸ ಬೇಕಾಗಿದ್ದರೂ ಕುಂಟುತ್ತಾ ಸಾಗಿ ಮೂರು ವರ್ಷ ವಿಳಂಬವಾಗಿ ಕಾಮಗಾರಿ ಮುಗಿಸಿದೆ. ನೂರೈವತ್ತು ಮೀಟರ್ ಉದ್ದದ ಈ ಸೇತುವೆಯ ಮೇಲ್ಭಾಗದ್ದುದ್ದಕ್ಕೂ ಎರಡೂ ಬದಿಯಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಉದ್ಘಾಟನೆಗೆ ಮುನ್ನವೇ ಕುಸಿಯುವ ಭೀತಿ ಎದುರಾಗಿದೆ. ಈ ಬಿರುಕುಗಳನ್ನು ಸಿಮೆಂಟು ನೀರಿಂದ ಮರೆ ಮಾಚಲು ತೇಪೆ ಹಾಕಲಾಯಿತದರೂ ಮತ್ತೆ ಅದರಲ್ಲೂ ಬಿರುಕು ಮುಂದುವರಿದಿದೆ. ಅದಲ್ಲದೆ ಈ ಸೇತುವೆಯ ಸಂಪರ್ಕರಸ್ತೆ ಬುಡದಲ್ಲೇ ಕುಸಿತ ಕಂಡು ಮತ್ತಷ್ಟು ಅಪಾಯ ಎದುರಾಗಿದ್ದು ಕುಂದಾಪುರ ಮೂಲದ ಫಿಲಿಪ್ ಡಿ.ಕೋಸ್ತ ಗುತ್ತಿಗೆದಾರಿಕೆಯ ಇಷ್ಟು ದೊಡ್ಡ ಮೊತ್ತದ ಕಾಮಗಾರಿ ಹೀಗಾಗುವ ಮೂಲಕ ಜನರ ತೆರಿಗೆ ಹಣ ಈ ರೀತಿಯಲ್ಲಿ ಪೋಲಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.