ಕಾಂಗ್ರೆಸ್‌ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ವಿಧಿವಶ

ಮಂಗಳೂರು:ಯೋಗ ಮಾಡುತ್ತಿದ್ದಾಗ ತಲೆಗೆ ಪೆಟ್ಟಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ವಿಧಿವಶರಾಗಿದ್ದಾರೆ.ಆಸ್ಕರ್ ಫೆರ್ನಾಂಡಿಸ್ ಅವರಿಗೆ ತಲೆಯ ಒಳಭಾಗಕ್ಕೆ ಪೆಟ್ಟು ಬಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಈ ಹಿನ್ನೆಲೆಯಲ್ಲಿ, ಆಸ್ಕರ್ ಫರ್ನಾಂಡಿಸ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರಿಂದು ಕೊನೆಯುಸಿರೆಳೆದಿದ್ದಾರೆ.

ಉಡುಪಿಯಲ್ಲಿ 1972ರಲ್ಲಿ ಉಡುಪಿ ಪುರಸಭೆಗೆ ಜನರಿಂದ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದ ಆಸ್ಕರ್, 1980ರಲ್ಲಿ ತನ್ನ ರಾಜಕೀಯ ಗುರು ಟಿ.ಎ.ಪೈ ಅವರನ್ನೇ ಮಣಿಸಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಒಮ್ಮಿಂದೊಮ್ಮೆಗೆ ರಾಷ್ಟ್ರರಾಜಕಾರಣಕ್ಕೆ ನೆಗೆದು ಅಲ್ಲಿಂದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ಐದು ಬಾರಿ ಸಂಸತ್ ಸದಸ್ಯರಾಗಿ ಉಡುಪಿಯಲ್ಲಿ ಚುನಾಯಿತರಾಗಿದ್ದ ಅವರು ನಂತರ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಡಾ.ಮನಮೋಹನ್ ಸಿಂಗ್ ಸರಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಆಸ್ಕರ್ ಫರ್ನಾಂಡಿಸ್ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. 1980ರಿಂದ 1996ರ ವರೆಗೆ ಕರ್ನಾಟಕದ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು. ಬಳಿಕ, 1998ರಲ್ಲಿ ಹಾಗೂ 2004ರಲ್ಲಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು.ಆಸ್ಕರ್ ಫೆರ್ನಾಂಡಿಸ್ ಅವರು ಪತ್ನಿ ಬ್ಲೋಸಮ್ ಫೆರ್ನಾಂಡಿಸ್, ಪುತ್ರ ಹಾಗೂ ಪುತ್ರಿಯೊಂದಿಗೆ ಅಪಾರ ಸಂಖ್ಯೆಯ ಬಂಧುಮಿತ್ರರು, ನಿಕಟವರ್ತಿಗಳು, ಅಭಿಮಾನಿಗಳು ಹಾಗೂ ಹಿಂಬಾಲಕರನ್ನು ಅಗಲಿದ್ದಾರೆ.

Related Posts

Leave a Reply

Your email address will not be published.