ಕೂಳೂರು ಮೊಗವೀರ ಗ್ರಾಮ ಸಭೆಯ ವತಿಯಿಂದ ಉಚಿತ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ
ಕೂಳೂರು ಮೊಗವೀರ ಗ್ರಾಮ ಸಭೆಯ ವತಿಯಿಂದ ಕುಳಾಯಿಯಲ್ಲಿ ಸೋಮವಾರ ಉಚಿತ ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು. ಮೀನುಗಾರಿಕೆ, ಬಂದರು ಸಚಿವ ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸರಕಾರ ಲಸಿಕೆ ನೀಡಲು ಆದ್ಯತೆಯ ಪಟ್ಟಿ ಮಾಡುವಾಗ ಮೀನುಗಾರ ಸಮುದಾಯವನ್ನು ಸೇರಿಸಬೇಕು ಎಂದು ನಾನು ಸೂಚಿಸಿದ ಮೇರೆಗೆ ಇದೀಗ ಬೇರೆ ಬೇರೆ ಭಾಗಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ ಎಂದರು. ಕೆಲವೊಂದು ಅಪಪ್ರಚಾರಗಳಿಂದ ಜನ ಲಸಿಕೆ ಪಡೆಯಲು ಹಿಂದೇಟು ಹಾಕಿದರೂ ಇದೀಗ ಜಿಲ್ಲೆಯಲ್ಲಿ 7.50 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಜನರು ಈ ಕೊರೊನಾ ನಿಯಂತ್ರಣಕ್ಕಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ನುಡಿದರು.
ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಲಸಿಕೆ ಪಡೆದ ಬಳಿಕ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ,ಮಾಸ್ಕ್ ಧರಿಸಿಕೊಂಡು ಮುಂಜಾಗ್ರತೆ ವಹಿಸಬೇಕು.ಮೀನುಗಾರಿಕಾ ಸಚಿವರ ಸಲಹೆ ಮೇರೆಗೆ ಇಲ್ಲಿ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ. ಲಸಿಕೆ ಕೊರೊನಾ ಬಾರದಂತೆ ಮುಂಜಾಗ್ರತೆಯಾಗಿ ಹಾಕಿಸಿಕೊಳ್ಳಿ ಎಂದು ಸಲಹೆ ನೀಡಿದರು.ವೇದಿಕೆಯಲ್ಲಿ ಕೆಎಫ್ಡಿಸಿ ಅಧ್ಯಕ್ಷ ನಿತಿನ್ ಕುಮಾರ್,ಮನಪಾ ಸದಸ್ಯರಾದ ವೇದಾವತಿ, ವರುಣ್ ಚೌಟ, ರಾಜೇಶ್ ಸಾಲ್ಯಾನ್,ಬಿಜೆಪಿ ಮುಖಂಡ ರಾಮಚಂದರ್ ಬೈಕಂಪಾಡಿ,ವಿಠಲ್ ಸಾಲ್ಯಾನ್,ಕೂಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಭರತ್ ಕುಮಾರ್, ಎನ್ಎಂಪಿಟಿ ನಿರ್ವಸಿತರ ನಾಲ್ಕುಪಟ್ಣ ಮೊಗವೀರ ಸಭಾದ ಅಧ್ಯಕ್ಷ ಮೋಹನ್ ಕೋಡಿಕಲ್,ಸುಶಾಂತ್ ಸುವರ್ಣ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಹರೀಶ್ ಕುಮಾರ್,ಸಹಾಯಕ ನಿರ್ದೇಶಕಿ ಸುಶ್ಮಿತ,ದಿಲೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.